ADVERTISEMENT

ಭೂಸ್ವಾಧೀನ ಮಸೂದೆ: ಮುಂದುವರಿದ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಭೂ ಸ್ವಾಧೀನ ಮಸೂದೆಗೆ ಸಂಬಂಧಿಸಿದಂತೆ ಸಚಿವರ ತಂಡದಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಇನ್ನು ಎರಡು ಅಥವಾ ಮೂರು ಸಭೆಗಳ ನಂತರ ಮಸೂದೆಗೆ ಅಂತಿಮ ರೂಪ ದೊರಕಲಿದೆ ಎಂದು ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.

ಪೂರ್ವಾನ್ವಯವಾಗುವಂತೆ ಮತ್ತು ಭೂಮಿ ಮಾಲೀಕನ ಒಪ್ಪಿಗೆ ಪಡೆಯುವ ಅಂಶಗಳ ಬಗ್ಗೆ ಸಚಿವರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಕಳೆದ ಸಭೆಯ್ಲ್ಲಲೂ ಇದೇ ವಿಚಾರವಾಗಿ ಭಿನ್ನಮತ ವ್ಯಕ್ತವಾಗಿತ್ತು.

ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸುವ ಭೂಪ್ರದೇಶದ ಶೇಕಡಾ 80ರಷ್ಟು ಜನರು ಒಪ್ಪಿಗೆ ನೀಡಬೇಕು ಎಂಬ ಮೂಲ ಕಲಂನ್ನು ಉಳಿಸಿಕೊಳ್ಳಬೇಕು ಎಂದು ಬಹುತೇಕ ಸಚಿವರು ಅಭಿಪ್ರಾಯಪಟ್ಟಿದ್ದಾರೆ. 80ರಷ್ಟು ಜನರ ಬದಲು 66ರಷ್ಟು ಜನರು ಎಂದು ಬದಲಾಯಿಸುವ ಪ್ರಸ್ತಾವವೂ ಇದೆ. ಎರಡು ಅಥವಾ ಮೂರು ಸಭೆಗಳ ನಂತರ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಮಸೂದೆಯನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರ ತಂಡದ ಮುಖ್ಯಸ್ಥ ಕೃಷಿ ಸಚಿವ ಶರದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೊರತುಪಡಿಸಿ ಉಳಿದೆಲ್ಲ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.