ADVERTISEMENT

ಭ್ರಷ್ಟರಿಗೆ ಬಿಜೆಪಿ ರತ್ನಗಂಬಳಿ: ರಾಹುಲ್ ಗೇಲಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಗೋರಖ್‌ಪುರ (ಪಿಟಿಐ): ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತದಲ್ಲಿರುವ ಎಲ್ಲ ರಾಜ್ಯ ಸರ್ಕಾರಗಳು ಭ್ರಷ್ಟಾಚಾರದಲ್ಲಿ ನಲುಗಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಪ್ರಹಾರ ಮಾಡಿದರು.

ಒಂದೆಡೆ, ಈ ಪಕ್ಷ ರಾಷ್ಟ್ರದ ಉದ್ದಗಲಕ್ಕೂ ಭ್ರಷ್ಟಾಚಾರದ ವಿರುದ್ಧ ಯಾತ್ರೆ ನಡೆಸುತ್ತದೆ. ಮತ್ತೊಂದೆಡೆ, ಭ್ರಷ್ಟಾಚಾರದಲ್ಲಿ ಸಿಲುಕಿ ಬೇರೆ ಪಕ್ಷಗಳಿಂದ ಉಚ್ಛಾಟನೆಗೊಂಡವರನ್ನು ಬರಸೆಳೆದುಕೊಳ್ಳುತ್ತಿದೆ. ಮಾಯಾವತಿ ಅವರಿಂದ ಉಚ್ಛಾಟನೆಗೊಂಡ ಬಾಬು ಸಿಂಗ್ ಕುಶವಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ ಎಂದವರು ಗೇಲಿ ಮಾಡಿದರು.

ಈ ಪಕ್ಷದ ಆಡಳಿತವಿರುವ ಉತ್ತರಾಖಂಡ, ಗುಜರಾತ್, ಜಾರ್ಖಂಡ್‌ಗಳು ಕೂಡ ಲಂಚದಲ್ಲಿ ಮುಳುಗಿ ಹೋಗಿವೆ ಎಂದರು.

ADVERTISEMENT

ಬಿಎಸ್‌ಪಿಯಿಂದ ಉಚ್ಚಾಟನೆಗೊಂಡ ನಂತರ ಕುಶವಾ ಕಾಂಗ್ರೆಸ್ ಸೇರುವುದಕ್ಕಾಗಿ ವರಿಷ್ಠರನ್ನು ಸಂಪರ್ಕಿಸಿದ್ದರು. ಆದರೆ ಕಾಂಗ್ರೆಸ್ ಅವರ ಕೋರಿಕೆಯನ್ನು ತಿರಸ್ಕರಿಸಿತು ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಿ ಬಿಡುಗಡೆಯಾಗಿದ್ದ ಸಾವಿರಾರು ಕೋಟಿ ರೂಪಾಯಿ ಹಣವನ್ನು ಅಧಿಕಾರ ಗದ್ದುಗೆಯಲ್ಲಿರುವ `ಮಾಯಾ ಆನೆ~ ನುಂಗಿ ನೀರು ಕುಡಿದಿದೆ ಎಂದು ಟೀಕಿಸಿದರು.

ಉ.ಪ್ರ: ಫೆ.4ರ ಬದಲು ಬೇರೆ ದಿನ ಚುನಾವಣೆ

ನವದೆಹಲಿ (ಪಿಟಿಐ): ಪ್ರವಾದಿ ಮೊಹಮ್ಮದ್ ಜನ್ಮಜಯಂತಿ ಕೂಡ ಫೆ.4ರಂದು ಬರುವ ಸಂಭವವಿರುವುದರಿಂದ ಅಂದು ಉತ್ತರಪ್ರದೇಶದಲ್ಲಿ ನಡೆಯಬೇಕಿದ್ದ ಮೊದಲ ಹಂತದ ವಿಧಾನಸಭಾ ಚುನಾವಣೆ ರದ್ದುಗೊಂಡಿದೆ.
ಇದನ್ನು ಭಾನುವಾರ ತಿಳಿಸಿರುವ ಕೇಂದ್ರ ಚುನಾವಣಾ ಆಯೋಗ, ಚುನಾವಣೆ ನಡೆಯುವ ಬದಲಾದ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.