ADVERTISEMENT

ಭ್ರಷ್ಟಾಚಾರ ತಡೆ: ಸುಗ್ರೀವಾಜ್ಞೆಗೆ ಸಂಪುಟ ನಕಾರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ನೆಚ್ಚಿನ ಭ್ರಷ್ಟಾಚಾರ ವಿರೋಧಿ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಪ್ರಸ್ತಾಪವನ್ನು ಕೇಂದ್ರ ಸಂಪುಟ ಭಾನುವಾರ ನಡೆದ ವಿಶೇಷ ಸಭೆಯಲ್ಲಿ ತಿರಸ್ಕರಿಸಿತು.

ಆಂಧ್ರ ಪ್ರದೇಶ ಪುನರ್‌ರಚನೆ ಮಸೂ­ದೆಯ ತಿದ್ದುಪಡಿಗಳಿಗೆ ಅಂಗೀಕಾರ ಮತ್ತು ಜಾಟ್‌ ಸಮುದಾಯಕ್ಕೆ ಮೀಸಲಾತಿ ಕೊಡುಗೆ ಸಂಪುಟದ ಇತರ ಪ್ರಮುಖ ತೀರ್ಮಾನಗಳಾಗಿವೆ. ಆಂಧ್ರಪ್ರದೇಶ ರಾಜ್ಯ ವಿಭಜನೆ ನಂತರ ಸೀಮಾಂಧ್ರ ರಾಜ್ಯಕ್ಕೆ ಐದು ವರ್ಷಗಳ ಕಾಲ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಸಂಪುಟ ಒಪ್ಪಿಗೆ ನೀಡಿದೆ.

ವಾರಾಂತ್ಯದಲ್ಲಿ ಯುಪಿಎ ಸಚಿವರು ಮತ್ತು ಕಾಂಗ್ರೆಸ್‌ ನಾಯಕರ ನಡುವಣ ತೀವ್ರ ಸಮಾಲೋಚನೆ ನಂತರ ಸಂಪುಟ ಈ ನಿರ್ಧಾರಗಳನ್ನು ಕೈಗೊಂಡಿದೆ. ಸಭೆಗೂ ಮೊದಲು ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ರಕ್ಷಣಾ ಸಚಿವ ಎ.ಕೆ.ಆಂಟನಿ ಮತ್ತು ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಭೇಟಿಯಾದರು.

ADVERTISEMENT

ಶಿಂಧೆ ಮತ್ತು ಕಾನೂನು ಸಚಿವ ಕಪಿಲ್‌ ಸಿಬಲ್‌ ಅವರು ಶನಿವಾರ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿಯಾಗಿದ್ದರು. ಚುನಾವಣೆ ಘೋಷಣೆಗೆ ಕೆಲವೇ ದಿನ ಮೊದಲು ಭ್ರಷ್ಟಾಚಾರ ವಿರೋಧಿ ಮಸೂದೆಗಳ ಸುಗ್ರೀವಾಜ್ಞೆಗೆ ಸಹಿ ಮಾಡಲು ಪ್ರಣವ್‌ ಅವರು ಉತ್ಸಾಹ ತೋರಲಿಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.