ADVERTISEMENT

ಭ್ರಷ್ಟಾಚಾರ ನಿಗ್ರಹ ಕಾಯ್ದೆ: ಜನರ ಸಲಹೆಗೆ ಕೇಂದ್ರ ಕೋರಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 10:30 IST
Last Updated 12 ಏಪ್ರಿಲ್ 2011, 10:30 IST

ನವದೆಹಲಿ (ಪಿಟಿಐ): ಉದ್ದೇಶಿತ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ ಅಳವಡಿಸಲು ಅನುಕೂಲವಾಗುವಂತೆ, ಲಂಚ ಪ್ರಕರಣಗಳಲ್ಲಿ ಶಾಮೀಲಾದ ವಿದೇಶೀ ಸರ್ಕಾರಿ ಅಧಿಕಾರಿಗಳ ಹಸ್ತಾಂತರ ಮತ್ತು ಕಾನೂನು ಕ್ರಮ ಕೈಗೊಳ್ಳಲು ಸಹಾಯಕವಾಗುವಂತಹ ಸಲಹೆಗಳನ್ನು  ನೀಡುವಂತೆ ಸರ್ಕಾರ ಜನತೆಯನ್ನು ಕೋರಿದೆ.

ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿಚಾರಗಳಿಗೆ ಸಂಬಂಧಿಸಿದಂತೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು, ವಿದೇಶೀ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಅಂತರರಾಷ್ಟ್ರೀಯ ಸಂಸ್ಥೆಗಳ ಮಸೂದೆಗೆ (2011) ಸಂಬಂಧಿಸಿದಂತೆ ಸಲಹೆಗಳನ್ನು ನೀಡುವಂತೆ ಸರ್ಕಾರವು ಸಾರ್ವಜನಿಕ ಪ್ರಕಟಣೆಯೊಂದರಲ್ಲಿ ಜನತೆಯನ್ನು ಕೋರಿದೆ.

ವಿದೇಶೀ ಸರ್ಕಾರಿ ಅಧಿಕಾರಿ ಅಥವಾ ಸಾರ್ವಜನಿಕ ಅಂತರರಾಷ್ಟ್ರೀಯ ಸಂಘಟನೆಗಳ ಅಧಿಕಾರಿಗಳು ಲಂಚ ಪಡೆಯುವುದು ಅಥವಾ ಲಂಚ ನೀಡುವುದನ್ನು ಈ  ಮಸೂದೆಯು  ನಿಷೇಧಿಸುತ್ತದೆ ಮತ್ತು ಇಂತಹ ಕೃತ್ಯಗಳಿಗೆ ಏಳು ವರ್ಷಗಳ ಸೆರೆವಾಸದ ಶಿಕ್ಷೆ ನೀಡುವ ಅವಕಾಶವನ್ನು ಕಲ್ಪಿಸಿದೆ.

ಲೋಕಸಭೆಯಲ್ಲಿ ಮುಂಗಡಪತ್ರ ಅಧಿವೇಶನದ ಕೊನೆಯ ದಿನ ಮಂಡಿಸಲಾದ ಈ ಮಸೂದೆಗೆ ಸಂಬಂಧಿಸಿದಂತೆ ಸಾರ್ವಜನಿಕರು ನೀಡುವ ಸಲಹೆಗಳು, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆ ಸಮಾವೇಶಕ್ಕೆ ಅನುಮೋದನೆ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಹಾಯಕವಾಗಲಿವೆ.ಸರ್ಕಾರವು ಏಪ್ರಿಲ್ 30ರವರೆಗೆ ಸಲಹೆಗಳನ್ನು ಸರ್ಕಾರವು ಅಂಗೀಕರಿಸುವುದು ಎಂದು ಪ್ರಕಟಣೆ ಹೇಳಿದೆ.

ಹಾಲಿ ಕಾಯ್ದೆಗಳ ಅಡಿಯಲ್ಲಿ ಅಂತರಾಷ್ಟ್ರೀಯ ವಹಿವಾಟುಗಳಲ್ಲಿ ವಿದೇಶೀ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶಗಳಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.