ADVERTISEMENT

ಮಂಗಳನೆಡೆಗೆ ಯಶಸ್ವಿ ಪಯಣ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2013, 10:09 IST
Last Updated 5 ನವೆಂಬರ್ 2013, 10:09 IST
ಮಂಗಳನೆಡೆಗೆ ಯಶಸ್ವಿ ಪಯಣ
ಮಂಗಳನೆಡೆಗೆ ಯಶಸ್ವಿ ಪಯಣ   

ಶ್ರೀಹರಿಕೋಟಾ (ಐಎಎನ್‌ಎಸ್/ಪಿಟಿಐ):  ಬಹು ನಿರೀಕ್ಷೆಯ `ಮಂಗಳ ನೌಕೆ'ಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಇಲ್ಲಿನ ಸತೀಶ್‌ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಂಗಳವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.

ಪೂರ್ವನಿರ್ಧರಿತ ಕಾರ್ಯಕ್ರಮದಂತೆ ಇಂದು ಮಧ್ಯಾಹ್ನ 2.38ಕ್ಕೆ ಪಿಎಸ್‌ಎಲ್‌ವಿ ಸಿ-25 ಉಡಾವಣ ವಾಹನದ ಮೂಲಕ ಮಂಗಳ ನೌಕೆಯನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿಬಿಡಲಾಯಿತು. ಉಡಾವಣೆಗೊಂಡ 40 ನಿಮಿಷದ ಬಳಿಕ ಮಂಗಳ ನೌಕೆ ಯಶಸ್ವಿಯಾಗಿ ಭೂಸ್ಥಿರ ಕಕ್ಷೆಯನ್ನು ಸೇರಿತು ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಮೇಲ್ಮೈಲಕ್ಷಣ,  ವಾತಾವರಣ, ರಾಸಾಯನಿಕ ಸಂಯೋಜನೆಗಳಲ್ಲಿ ಬಹುಮಟ್ಟಿಗೆ ಭೂಮಿಯನ್ನು ಹೋಲುವ ‘ಅಂಗಾರಕ’ನಲ್ಲಿ (ಮಂಗಳ) ಮಿಥೇನ್‌ ಅನಿಲ ಇದ್ದಿರುವ ಸಾಧ್ಯತೆಯನ್ನು ಅನ್ವೇಷಿಸುವುದು ಯಾನದ ಪ್ರಮುಖ ಉದ್ದೇಶ.

ADVERTISEMENT

ಮಿಥೇನ್‌ ಅನಿಲ ಕಂಡುಬಂದಲ್ಲಿ ಕೋಟ್ಯಂತರ ವರ್ಷಗಳ ಹಿಂದೆ ಮಂಗಳನಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದಿರಬಹುದಾದ ಸಾಧ್ಯತೆಯನ್ನು ಅದು ಸೂಚಿಸುತ್ತದೆ. ಆ ಸಂಶೋಧನೆ ಭೂಮಿಯಲ್ಲಿ ಜೀವಿಗಳ ಉಗಮ, ಸೃಷ್ಟಿಕ್ರಿಯೆಯ ರಹಸ್ಯ ಪತ್ತೆಹಚ್ಚಲು ನೆರವಾಗಲಿದೆ.

 ಭೂಸ್ಥಿರ ಕಕ್ಷೆ ಸೇರಿದ ನಂತರ ಭೂಮಿ­ಯನ್ನು ಪರಿಭ್ರಮಿಸಿ ಡಿಸೆಂಬರ್‌ 1ರಂದು ಕೆಂಪು ಗ್ರಹ­­ದತ್ತ ನಿರ್ಗಮಿಸಲಿದೆ. 2014ರ ಸೆಪ್ಟೆಂಬರ್‌ 24ರಂದು 324 ದಿನಗಳ ನಂತರ ಮಂಗಳ ಕಕ್ಷೆ ಸೇರುತ್ತದೆ. ₨450 ಕೋಟಿ ವೆಚ್ಚದ ‘ಮಂಗಳ­ಯಾನ’ ಯಶಸ್ವಿಯಾಗಿ ನಡೆದಲ್ಲಿ ಮಂಗಳಕ್ಕೆ ಉಪಗ್ರಹ ಕಳುಹಿಸಿದ ಜಗತ್ತಿನ ನಾಲ್ಕನೇ ಬಾಹ್ಯಾಕಾಶ ಸಂಸ್ಥೆ ಮತ್ತು ವಿಶ್ವದ ಆರನೇ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.