ಮಧ್ಯಾಹ್ನ 2.38ಕ್ಕೆ ಉಡಾವಣೆ l ಪ್ರಧಾನಿ ಹಾಜರಿ ಸಂಭವ l ದೂರದರ್ಶನದಲ್ಲಿ ನೇರ ಪ್ರಸಾರ
ಚೆನ್ನೈ/ಬೆಂಗಳೂರು (ಪಿಟಿಐ): ಮಂಗಳಗ್ರಹದಲ್ಲಿ ‘ಜೀವಾಧಾರವಾದ’ ಮಿಥೇನ್ ಅನಿಲದ ಕುರುಹು ಪತ್ತೆ ಹಚ್ಚಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕಳುಹಿಸುತ್ತಿರುವ ‘ಮಂಗಳ ನೌಕೆ’ಯ ಉಡಾವಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.
ಪೂರ್ವನಿರ್ಧರಿತ ಕಾರ್ಯಕ್ರಮದ ಪ್ರಕಾರ ಮಂಗಳವಾರ (ನ. 5) ಮಧ್ಯಾಹ್ನ 2.38ಕ್ಕೆ ಪಿಎಸ್‌ಎಲ್‌ವಿ- ಸಿ 25 ಉಡಾವಣಾ ವಾಹನದ ಮೂಲಕ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಹಾರಿಬಿಡಲಾಗುತ್ತದೆ.
ಮೇಲ್ಮೈಲಕ್ಷಣ, ವಾತಾವರಣ, ರಾಸಾಯನಿಕ ಸಂಯೋಜನೆಗಳಲ್ಲಿ ಬಹುಮಟ್ಟಿಗೆ ಭೂಮಿಯನ್ನು ಹೋಲುವ ‘ಅಂಗಾರಕ’ನಲ್ಲಿ (ಮಂಗಳ) ಮಿಥೇನ್ ಅನಿಲ ಇದ್ದಿರುವ ಸಾಧ್ಯತೆಯನ್ನು ಅನ್ವೇಷಿಸುವುದು ಯಾನದ ಪ್ರಮುಖ ಉದ್ದೇಶ.
ಮಿಥೇನ್ ಅನಿಲ ಕಂಡುಬಂದಲ್ಲಿ ಕೋಟ್ಯಂತರ ವರ್ಷಗಳ ಹಿಂದೆ ಮಂಗಳನಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದಿರಬಹುದಾದ ಸಾಧ್ಯತೆಯನ್ನು ಅದು ಸೂಚಿಸುತ್ತದೆ. ಆ ಸಂಶೋಧನೆ ಭೂಮಿಯಲ್ಲಿ ಜೀವಿಗಳ ಉಗಮ, ಸೃಷ್ಟಿಕ್ರಿಯೆಯ ರಹಸ್ಯ ಪತ್ತೆಹಚ್ಚಲು ನೆರವಾಗಲಿದೆ.
ಅಮೆರಿಕ, ರಷ್ಯಾ ಹಾಗೂ ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳು ಈವರೆಗೆ ಮಂಗಳನ ಅಂಗಳಕ್ಕೆ ನೌಕೆಯನ್ನು ಕಳುಹಿಸಿದ್ದರೂ ಮಿಥೇನ್ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಕಳೆದ ವರ್ಷ ಇಸ್ರೊ ಚಂದ್ರಗ್ರಹಕ್ಕೆ ಕಳುಹಿಸಿದ್ದ ‘ಚಂದ್ರಯಾನ–1’ ಚಂದ್ರಮನ ಅಂಗಳದಲ್ಲಿ ನೀರಿನ ಕುರುಹನ್ನು ಮೊದಲ ಸಲ ಪತ್ತೆಹಚ್ಚಿತ್ತು. ಅದುವರೆಗೆ ಬೇರೆ ಯಾವ ದೇಶಕ್ಕೂ ಚಂದ್ರನಲ್ಲಿ ನೀರಿನ ಕುರುಹು ದೃಢಪಡಿಸಲು ಆಗಿರಲಿಲ್ಲ.
ಈ ಮಂಗಳಯಾನ ಸಹ ಅಂತಹದ್ದೇ ಅಚ್ಚರಿದಾಯಕ ಫಲಿತಾಂಶ ತಂದುಕೊಡಬಹುದು ಎಂಬ ನಿರೀಕ್ಷೆಯನ್ನು ಇಸ್ರೊ ವಿಜ್ಞಾನಿಗಳು ಹೊಂದಿದ್ದಾರೆ.
ಭರದ ಸಿದ್ಧತೆ: ಚೆನ್ನೈನಿಂದ 100 ಕಿ.ಮೀ ದೂರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ರಾಕೆಟ್ ಉಡಾವಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ.
ಸೋಮವಾರ ಸಂಜೆಯವರೆಗೂ ಪೂರ್ವಭಾವಿ ಕೆಲಸಗಳನ್ನು ಪೂರೈಸಿರುವ ಇಸ್ರೊ ವಿಜ್ಞಾನಿಗಳು ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಭಾಷ್ಯ ಬರೆಯಲಿರುವ ‘ಮಂಗಳ’ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಇಸ್ರೊದ ಬಹು ವಿಶ್ವಾಸಾರ್ಹ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ ‘ಪಿಎಸ್‌ಎಲ್‌ವಿ – ಸಿ25’ ಮಂಗಳ ನೌಕೆಯನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. 44.4 ಮೀಟರ್ ಎತ್ತರದ ರಾಕೆಟನ್ನು ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಕಟ್ಟೆಯಲ್ಲಿ ಅಳವಡಿಸಲಾಗಿದೆ.
ಉಪಗ್ರಹವನ್ನು ಹೊತ್ತ ರಾಕೆಟ್‌ಗೆ ಗಾಳಿಯಿಂದ ರಕ್ಷಣೆ ನೀಡಲು 76 ಮೀಟರ್ ಎತ್ತರದ ಮೊಬೈಲ್ ಗೋಪುರವನ್ನು ಸುತ್ತ ನಿಲ್ಲಿಸಲಾಗಿದೆ. ಪ್ರತಿ ಗಂಟೆಗೆ 230 ಕಿ.ಮೀ ಗಾಳಿಯ ವೇಗ ಮತ್ತು ಬಿರುಗಾಳಿ ತಡೆದುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅದನ್ನು ವಿನ್ಯಾಸ ಮಾಡಲಾಗಿದೆ. ಉಪಗ್ರಹ ಉಡಾವಣೆಗೆ ಸಮಯ ಹತ್ತಿರವಾಗುತ್ತಿದ್ದಂತೆ ಅದನ್ನು ತೆರವುಗೊಳಿಸಲಾಗುತ್ತದೆ.
ಉಡಾವಣೆಯಾದ 40 ನಿಮಿಷಗಳ ಬಳಿಕ ಉಪಗ್ರಹ ಭೂಸ್ಥಿರ ಕಕ್ಷೆ ಸೇರಲಿದೆ. ನಂತರ ಭೂಮಿಯನ್ನು ಪರಿಭ್ರಮಿಸಿ ಡಿಸೆಂಬರ್ 1ರಂದು ಕೆಂಪು ಗ್ರಹದತ್ತ ನಿರ್ಗಮಿಸಲಿದೆ. 2014ರ ಸೆಪ್ಟೆಂಬರ್ 24ರಂದು 324 ದಿನಗಳ ನಂತರ ಮಂಗಳ ಕಕ್ಷೆ ಸೇರುತ್ತದೆ. ₨450 ಕೋಟಿ ವೆಚ್ಚದ ‘ಮಂಗಳಯಾನ’ ಯಶಸ್ವಿಯಾಗಿ ನಡೆದಲ್ಲಿ ಮಂಗಳಕ್ಕೆ ಉಪಗ್ರಹ ಕಳುಹಿಸಿದ ಜಗತ್ತಿನ ನಾಲ್ಕನೇ ಬಾಹ್ಯಾಕಾಶ ಸಂಸ್ಥೆ ಮತ್ತು ವಿಶ್ವದ ಆರನೇ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಲಿದೆ.
ಮಿಥೇನ್ ಲಕ್ಷಣವೇನು?: ಇಂಗಾಲದ ಒಂದು ಮತ್ತು ಜಲಜನಕದ ನಾಲ್ಕು (ಸಿಎಚ್4) ಪರಮಾಣು ಕಣಗಳ ಸಂಯೋಜನೆಯಿಂದ ಮಿಥೇನ್ ರೂಪುಗೊಳ್ಳುತ್ತದೆ. ಇದು ವರ್ಣಾತೀತ ಮತ್ತು ವಾಸನೆರಹಿತ. ಇದೊಂದು ದಹನಶೀಲ ಅನಿಲ. ಭೂಮಿ ಮೇಲೆ ಇದು ಹೇರಳ ಪ್ರಮಾಣದಲ್ಲಿದೆ (ನೈಸರ್ಗಿಕ ಅನಿಲ, ಸಿಎನ್‌ಜಿ, ಎಲ್‌ಎನ್‌ಜಿ, ಗೋಬರ್ ಗ್ಯಾಸ್ ಇತ್ಯಾದಿ). ಇದು ಜೀವ ಇರುವಿಕೆಯ ಸಂಕೇತ.
ಮಿಥೇನ್ ಅಂಶ ಪತ್ತೆಯಾದರೆ ಭಾರತ ಮಾತ್ರವಲ್ಲ ಜಾಗತಿಕ ಸಮುದಾಯಕ್ಕೆ ದೊಡ್ಡ ಯಶಸ್ಸು ಸಿಕ್ಕಂತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.