ADVERTISEMENT

ಮಕ್ಕಳ ದೌರ್ಜನ್ಯ ಪ್ರಕರಣ ಇತ್ಯರ್ಥಕ್ಕೆ 10 ವರ್ಷ ಬೇಕು

ಭಾರತ ಯಾತ್ರೆ ಸಮಾರೋಪದಲ್ಲಿ ಮಕ್ಕಳ ಹಕ್ಕುಗಳ ಹೋರಾಟಗಾರ ಸತ್ಯಾರ್ಥಿ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಭಾರತ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕೈಲಾಶ್ ಸತ್ಯಾರ್ಥಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪರಸ್ಪರ ಸಮಾಲೋಚನೆ ನಡೆಸಿದರು
ಭಾರತ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕೈಲಾಶ್ ಸತ್ಯಾರ್ಥಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪರಸ್ಪರ ಸಮಾಲೋಚನೆ ನಡೆಸಿದರು   

ನವದೆಹಲಿ: ‘ಗೌರವಾನ್ವಿತ ರಾಷ್ಟ್ರಪತಿಗಳೆ ಇವತ್ತಿನಿಂದ ಮಕ್ಕಳ ವಿರುದ್ಧ ಯಾವುದೇ ರೀತಿಯ ಅಪರಾಧ ನಡೆಯದಿದ್ದರೂ, ಈಗಾಗಲೇ ದಾಖಲಾಗಿರುವ ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇನ್ನೂ 10 ವರ್ಷ ಬೇಕಾಗುತ್ತದೆ. ಇದೊಂದು  ದುರಂತವಲ್ಲವೇ’ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಪ್ರಶ್ನಿಸಿದ್ದಾರೆ.

ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮತ್ತು ‘ಮಾನವ ಕಳ್ಳಸಾಗಣೆ (ತಡೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ–2016’ರ ಜಾರಿಗೆ ಒತ್ತಾಯಿಸಿ ಕನ್ಯಾಕುಮಾರಿಯಿಂದ ಆರಂಭವಾಗಿದ್ದ ‘ಭಾರತ ಯಾತ್ರೆ’ಯು ಸೋಮವಾರ ನವದೆಹಲಿಯನ್ನು ತಲುಪಿತು. ರಾಷ್ಟ್ರಪತಿ ಭವನದಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಕೈಲಾಶ್ ಸತ್ಯಾರ್ಥಿ ಮಾತನಾಡಿದರು.

‘ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಸಲುವಾಗಿ ರಾಷ್ಟ್ರೀಯ ಮಕ್ಕಳ ನ್ಯಾಯಮಂಡಳಿಯನ್ನು ಸ್ಥಾಪಿಸಬೇಕು. ದೇಶದ ಪ್ರತಿ ಜಿಲ್ಲೆಗಳಲ್ಲೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ನಾವು ಈ ಯಾತ್ರೆಯ ಮೂಲಕ ಒತ್ತಾಯಿಸುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

‘ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರ ಪ್ರಮಾಣ ಶೇ 40ರಷ್ಟು. ಆದರೆ ನಮ್ಮ ವಾರ್ಷಿಕ ಬಜೆಟ್‌ನಲ್ಲಿ ಮಕ್ಕಳಿಗಾಗಿ ತೆಗೆದಿರಿಸುತ್ತಿರುವ ಅನುದಾನದ ಪ್ರಮಾಣ ಶೇ 4 ಮಾತ್ರ. ಮಕ್ಕಳ ರಕ್ಷಣೆಯನ್ನೂ ಬಜೆಟ್‌ನಲ್ಲಿ ಸೇರಿಸಬೇಕು. ಶಿಕ್ಷಣದ ಹಕ್ಕಿನ ಮೂಲಕ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಇನ್ನು ಶಿಕ್ಷಣದ ಮೂಲಕ ಹಕ್ಕುಗಳು ಎಂಬ ಪರಿಕಲ್ಪನೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೇರಿಸಬೇಕು’ ಎಂದು ಅವರು ಒತ್ತಾಯಿಸಿದರು.
*
ಭಾರತ ಯಾತ್ರೆ ಮತ್ತು ಅದರ ಉಪಯಾತ್ರೆಗಳು ಕ್ರಮಿಸಿದ ದೂರ ​11,000 ಕಿ.ಮೀ

22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಯಾತ್ರೆ ಹಾದು ಬಂದಿದೆ

ಮುಖ್ಯ ಯಾತ್ರೆ ಮತ್ತು ಉಪಯಾತ್ರೆಗಳ ಸಂಖ್ಯೆ ​7

ಯಾತ್ರೆ ನಡೆದ ದಿನಗಳ ಸಂಖ್ಯೆ 36

*
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಮಕ್ಕಳ ಕಳ್ಳಸಾಗಣೆ ವಿರುದ್ಧ ನಮ್ಮ ಅಹಿಂಸಾತ್ಮಕ ಯುದ್ಧವೇ ಭಾರತ ಯಾತ್ರೆ. ಭಾರತ ಇದನ್ನು ಗೆಲ್ಲಲಿದೆ.
ಕೈಲಾಶ್ ಸತ್ಯಾರ್ಥಿ
ಮಕ್ಕಳ ಹಕ್ಕುಗಳ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.