ADVERTISEMENT

ಮಧ್ಯಂತರ ಚುನಾವಣೆ ಇಲ್ಲ.

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಬೆಂಗಳೂರು: ‘ರಾಜ್ಯ ವಿಧಾನಸಭೆಗೆ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಈ ಸಂಬಂಧ ಕಾಂಗ್ರೆಸ್, ಜೆಡಿಎಸ್ ಗುಲ್ಲೆಬ್ಬಿಸುತ್ತಿದ್ದು, ಈ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಶುಕ್ರವಾರ  ಹೇಳಿದರು.ಸರ್ಕಾರದ ಸಹಸ್ರ ದಿನಾಚರಣೆ ಅಂಗವಾಗಿ ಇದೇ 20ರಂದು ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಿದ್ದು, ಅದರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದ ಜನ ಐದು ವರ್ಷ ಆಡಳಿತ ನಡೆಸಲು ಆಶೀರ್ವಾದ ಮಾಡಿದ್ದಾರೆ.

ಇಂತಹ ಸಂದರ್ಭದಲ್ಲಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ಯಾವ ಉದ್ದೇಶವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.ರಾಜ್ಯ ಸರ್ಕಾರದ ವಿರುದ್ಧದ ಕಾಂಗ್ರೆಸ್, ಜೆಡಿಎಸ್‌ನ ಹೋರಾಟ ವಿಫಲವಾಗಿವೆ. ಇದರಿಂದ  ಬೇಸತ್ತು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿವೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ಹಿಂಬಾಗಿಲು ಅಂದರೆ, ರಾಜಭವನ ಎಂದು ಪರೋಕ್ಷವಾಗಿ ರಾಜ್ಯಪಾಲರನ್ನು ಟೀಕಿಸಿದರು.

ಬಲ ಪ್ರದರ್ಶನ: ಫೆ.20ರ ಕಾರ್ಯಕ್ರಮ ಬಲ ಪ್ರದರ್ಶನದ ವೇದಿಕೆಯಾಗಲಿದೆ ಎಂದು ಹೇಳಿದ ಅನಂತಕುಮಾರ್ ಅವರು ಪಕ್ಷದೊಳಗಿನ ಕೆಲವರ ಅನುಮಾನಗಳಿಗೂ ಅದು ಉತ್ತರ ನೀಡಲಿದೆ ಎಂದರು.ರಾಜ್ಯದಲ್ಲಿ 58 ಸಾವಿರ ಮತಗಟ್ಟೆಗಳಿದ್ದು, ಪ್ರತಿಯೊಂದರಿಂದಲೂ ತಲಾ ಮೂವರು ಕಾರ್ಯಕರ್ತರು ಸಮಾವೇಶಕ್ಕೆ ಬರುತ್ತಾರೆ. ಸರ್ಕಾರಕ್ಕೆ ಒಂದು ಸಾವಿರ ದಿನ ಆಗಿರುವ ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಅಭಿನಂದಿಸುವುದು ಮತ್ತು ಪ್ರತಿಪಕ್ಷಗಳಿಗೆ ತಿರುಗೇಟು ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದೂ ಅವರು ಹೇಳಿದರು.

ಸಮಾವೇಶದಲ್ಲಿ ಮೂರು ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಲಾಗುವುದು. ಪಕ್ಷ ನಡೆದು ಬಂದ ಹಾದಿ, ವೈಚಾರಿಕ ಹಿನ್ನೆಲೆ ಮತ್ತು ಎನ್‌ಡಿಎ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಪಕ್ಷಿನೋಟ ಈ ಪ್ರದರ್ಶನಗಳಲ್ಲಿ ಇರುತ್ತದೆ ಎಂದರು.ಇಂಧನ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರೇಗೌಡ ಸೇರಿದಂತೆ ನಗರದ ಎಲ್ಲ ಬಿಜೆಪಿ ಶಾಸಕರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.