ADVERTISEMENT

ಮನದುಂಬಿ ಮಗನ ಹರಸಿದ ಹೀರಾಬಾ

ಪ್ರಧಾನಿ ಮೋದಿ 64ನೇ ಹುಟ್ಟುಹಬ್ಬ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ಅಹಮದಾಬಾದ್‌ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಬುಧವಾರ 64ನೇ ವರ್ಷಕ್ಕೆ ಕಾಲಿಟ್ಟರು. ಪ್ರಧಾನಿಯಾದ ನಂತರ ಮೊದಲ ಬಾರಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅವರು  ಯಥಾ­­ಪ್ರಕಾರ ಗಾಂಧಿನಗರದಲ್ಲಿರುವ ತಮ್ಮ ತಾಯಿ ಹೀರಾಬಾ ಅವರನ್ನು ಭೇಟಿ­ಯಾಗಿ ಆಶೀರ್ವಾದ ಪಡೆದರು.

ಜನ್ಮದಿನದಂದು ಯಾವುದೇ ಕಾರ­ಣಕ್ಕೂ ತಾಯಿಯ ಆಶೀರ್ವಾದ ಪಡೆ­ಯು­ವುದನ್ನು ಮರೆಯದ  ಮೋದಿ, ಪ್ರಧಾನಿ­ಯಾದ ನಂತರವೂ ಆ ಸಂಪ್ರ­ದಾಯ ಮುಂದುವರಿಸಿದ್ದಾರೆ.

ರಾಜಭವನದಲ್ಲಿ ತಂಗಿರುವ ಮೋದಿ ಬೆಳಿಗ್ಗೆ ಯಾವುದೇ ಭದ್ರತೆ ಇಲ್ಲದೇ ಗಾಂಧಿನಗರದಲ್ಲಿ ನೆಲೆಸಿರುವ ತಾಯಿ­ಯನ್ನು ಕಾಣಲು ಏಕಾಂಗಿ­ಯಾಗಿ ತೆರಳಿದರು.

ಪಾದಮುಟ್ಟಿ ನಮಸ್ಕರಿಸಿದ ಮಗನ  ತಲೆಯನ್ನು ಹೀರಾ ಬೆನ್‌ ಪ್ರೀತಿಯಿಂದ ನೇವರಿಸಿ ಅಕ್ಕರೆಯಿಂದ ಹಣೆಗೆ ಮುತ್ತಿಕ್ಕಿ ದರು. ಬಳಿಕ ಸಿಹಿ ತಿನ್ನಿಸಿ, ಹರಸಿದರು. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕಾಶ್ಮೀರದ ಜನರಿಗೆ ನೀಡಲೆಂಂದು ತಮ್ಮ ಬಳಿ ಇಟ್ಟುಕೊಂಡಿದ್ದ ಐದು ಸಾವಿರ ರೂಪಾಯಿಯನ್ನು ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ ನೀಡಲು ಅವರು ಮರೆಯಲಿಲ್ಲ.

ಮಗನದೊಂದಿಗೆ ಕಳೆದ 15 ನಿಮಿಷ ದಲ್ಲಿಯೇ 95 ವರ್ಷದ ಹೀರಾ ಬೆನ್‌, ಮಗನ ಆರೋಗ್ಯ, ಹೊಸ ಜವಾಬ್ದಾರಿ, ಕೆಲಸದ ಬಗ್ಗೆ ಕೇಳಿ ತಿಳಿದುಕೊಂಡರು.

‘ದೇಶಕ್ಕೆ ಪ್ರಧಾನಿಯನ್ನು ಕೊಡುಗೆ­ಯಾಗಿ ನೀಡಿದ ಹಿರಿಯ ಚೇತನ ಹೀರಾ ಬಾಯಿ ಅವರಿಗೆ ಸೆಲ್ಯೂಟ್‌’ ಎಂದು ಗುಜರಾತ್‌ ಮುಖ್ಯಮಂತ್ರಿ ಆನಂದಿ ಬೆನ್‌ ಪಟೇಲ್‌ ಟ್ವೀಟ್‌ ಮಾಡಿದ್ದಾರೆ.

ಮೋದಿ ಅವರು ಚೀನಾ ಅಧ್ಯಕ್ಷರನ್ನು ಭೇಟಿಯಾಗುವ ಮುನ್ನವೇ ಜಪಾನ್‌ ಪ್ರಧಾನಿ ಶಿಂಜೊ ಅಬೆ ಕರೆ ಮಾಡಿ ಜನ್ಮ ದಿನದ ಶುಭಾಶಯ ಹೇಳಿದರು. ಆಸ್ಟ್ರೇ­ಲಿಯಾ ಪ್ರಧಾನಿ ಟೋನಿ ಅಬಾಟ್‌  ಮಂಗಳವಾರವೇ ಕರೆ ಮಾಡಿದ್ದರು. 

ನವದೆಹಲಿಯಲ್ಲಿರುವ ಚೀನಾ ರಾಯ­ಭಾರಿ ಲೆ ಯುಚೆಂಗ್‌ ಮೋದಿ ಅವ­ರನ್ನು ಕಂಡು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌  ಹಾಗೂ ಇತರ ಚೀನಾ ನಾಯಕರ  ಶುಭಾಶಯ ತಲುಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.