ADVERTISEMENT

ಮನಮೋಹನ್‌ಗಾಗಿ ರಾಜ್ಯ ಹುಡುಕಾಟ

ಮನಮೋಹನ್‌ ಸಿಂಗ್‌ ಪುನರಾಯ್ಕೆಗೆ ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ಸಂಖ್ಯಾಬಲ ಕೊರತೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 20:15 IST
Last Updated 17 ಮೇ 2019, 20:15 IST
ಮನಮೋಹನ್‌ ಸಿಂಗ್‌
ಮನಮೋಹನ್‌ ಸಿಂಗ್‌   

ನವದೆಹಲಿ: ಎರಡು ಪೂರ್ಣ ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಜೂನ್‌ 14ರಂದು ಕೊನೆಯಾಗಲಿದೆ. 1991ರಿಂದಲೂ ಅವರು ಅಸ್ಸಾಂ ರಾಜ್ಯವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಆದರೆ, ಈ ಬಾರಿ ಅವರನ್ನು ಮರು ಆಯ್ಕೆ ಮಾಡುವಷ್ಟು ಸಂಖ್ಯಾಬಲ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ. ಹಾಗಾಗಿ ಹಿರಿಯ ನಾಯಕನನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ರಾಜ್ಯವನ್ನು ಹುಡುಕುವ ಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ.

ರಾಜ್ಯಸಭೆಯಲ್ಲಿ ತೆರವಾಗಿರುವ ಸ್ಥಾನಗಳಿಗಾಗಿ ಜೂನ್‌ 7ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ನಾಮಪತ್ರ ಸಲ್ಲಿಸಲು ಮೇ 28 ಕೊನೆಯ ದಿನವಾಗಿದೆ.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್‌ 25 ಸ್ಥಾನಗಳನ್ನು ಮಾತ್ರ ಹೊಂದಿದೆ. ಸಿಂಗ್‌ ಅವರನ್ನು ಆಯ್ಕೆ ಮಾಡಬೇಕಾದರೆ ಪ್ರಥಮ ಪ್ರಾಶಸ್ತ್ಯದ ಕನಿಷ್ಠ 43 ಮತಗಳು ಬೇಕು. ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರೆಟಿಕ್‌ ಫ್ರಂಟ್‌ನ (ಎಐಯುಡಿಎಫ್‌) 13 ಶಾಸಕರು ಕಾಂಗ್ರೆಸ್‌ಗೆ ಬೆಂಬಲ ನೀಡಿದರೂ ಐದು ಮತಗಳ ಕೊರತೆ ಉಂಟಾಗುತ್ತದೆ.

ADVERTISEMENT

‘ನಮ್ಮಲ್ಲಿ ಸಂಖ್ಯಾಬಲವಿಲ್ಲ. ಆದ್ದರಿಂದ, ಇಂಥ ಅನುಭವಿ, ಹಿರಿಯ ನಾಯಕರನ್ನು ಈ ರಾಜ್ಯದಿಂದ ಕಣಕ್ಕಿಳಿಸುವುದು ಸೂಕ್ತವಲ್ಲ’ ಎಂದು ಅಸ್ಸಾಂನ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ದೇವವ್ರತ ಸೈಕಿಯಾ ಹೇಳಿದ್ದಾರೆ. 1991ರಿಂದ ಸಿಂಗ್‌ ಅವರು ಅಧಿಕೃತವಾಗಿ ಗೌಹಾಟಿಯ ನಿವಾಸಿ; ಸೈಕಿಯಾ ಅವರ ತಾಯಿಹೆಮೊ ಪ್ರೊವಾ ಸೈಕಿಯಾ ಅವರ ಹೆಸರಿನಲ್ಲಿರುವ ಮನೆ ಸಿಂಗ್‌ ಅವರಅಧಿಕೃತ ನಿವಾಸವಾಗಿದೆ. ಸಿಂಗ್‌ ಅವರು ಇದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.

ತಮಿಳುನಾಡಿನಲ್ಲಿ ಅವಕಾಶ?: ಕರ್ನಾಟಕ, ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನ ಹಾಗೂ ಪಂಜಾಬ್‌ ರಾಜ್ಯಗಳಿಂದ ಸಿಂಗ್‌ ಅವರನ್ನು ಆಯ್ಕೆ ಮಾಡಿ ಕಳುಹಿಸಬಹುದಾದಷ್ಟು ಸಂಖ್ಯಾಬಲ ಆ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಇದ್ದರೂ, ಇವುಗಳಲ್ಲಿ ಯಾವ ರಾಜ್ಯದ ಸ್ಥಾನವೂ ಖಾಲಿ ಇಲ್ಲ. ಆದ್ದರಿಂದ, ಕಾಂಗ್ರೆಸ್‌ಗೆ ಉಳಿದಿರುವ ಏಕೈಕ ಆಯ್ಕೆ ಎಂದರೆ ತಮಿಳುನಾಡು. ಡಿಎಂಕೆಯ ಕನಿಮೊಳಿ, ಸಿಪಿಐಯ ಡಿ. ರಾಜ ಸೇರಿದಂತೆ ಈ ರಾಜ್ಯದಿಂದ ಆಯ್ಕೆಯಾಗಿದ್ದ ಆರು ಮಂದಿ ರಾಜ್ಯಸಭಾ ಸದಸ್ಯರು ಮೇ 24ರಂದು ನಿವೃತ್ತರಾಗುತ್ತಿದ್ದಾರೆ. ರಾಜ್ಯದಿಂದ ಕನಿಷ್ಠ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡುವಷ್ಟು ಸಂಖ್ಯಾಬಲ ಡಿಎಂಕೆಗೆ ಇದೆ.

ಕಾಂಗ್ರೆಸ್‌– ಡಿಎಂಕೆ ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಕಾರಣಕ್ಕೆ ಡಿಎಂಕೆಯು ರಾಜ್ಯಸಭೆಯ ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಈ ಬಾರಿ ತೂತ್ತುಕುಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕನಿಮೊಳಿ ಅವರು ಗೆದ್ದರೆ ಅವರ ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್‌ಗೆ ಕೊಡುವ ಸಾಧ್ಯತೆ ಇದೆ. ಇನ್ನೊಂದು ಸ್ಥಾನವನ್ನು ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂಗೆ (ಎಂಡಿಎಂಕೆ) ಬಿಟ್ಟುಕೊಡುವುದಾಗಿ ಡಿಎಂಕೆ ಈಗಾಗಲೇ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.