ADVERTISEMENT

ಮನೆಯಲ್ಲಿ ಶೌಚಾಲಯ ಇಲ್ಲದಿದ್ದರೆ ವಧು ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಕೋಟಾ (ರಾಜಸ್ತಾನ) (ಪಿಟಿಐ): ಮನೆ ಮನೆಗಳಲ್ಲಿ ಶೌಚಾಲಯದ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ, ಜಲ, ನೈರ್ಮಲ್ಯ ಸಚಿವ ಜೈರಾಂ ರಮೇಶ್, ಶೌಚಾಲಯ ಇಲ್ಲದಿದ್ದರೆ ವಧು ಇಲ್ಲ, ಶೌಚಾಲಯ ಇಲ್ಲದ ಮನೆಗೆ ಸೊಸೆಯಾಗಿ ಹೋಗಬೇಡಿ ಎಂದು ಮಹಿಳೆಯರಿಗೆ ಕರೆ ನೀಡಿದ್ದಾರೆ.

ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಇಲ್ಲಿಗೆ ಸಮೀಪದ ಖಜೂರಿ ಎಂಬಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು, `ವಿವಾಹದ ಯೋಗಾಯೋಗದ ಕುರಿತು ನೀವು ಜ್ಯೋತಿಷಿಗಳನ್ನು ಸಂಪರ್ಕಿಸಿ ಆದರೆ ಇದೇ ಸಂದರ್ಭದಲ್ಲಿ ನಿಮ್ಮ ಭಾವಿ ಪತಿಯ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಿ~ ಎಂದರು.

ಇದೇ ಸಂದರ್ಭದಲ್ಲಿ ಬಯಲು ಶೌಚಾಲಯ ವ್ಯವಸ್ಥೆ ನಿರ್ಮೂಲನೆ ಉದ್ದೇಶದ `ನಿರ್ಮಲ ಭಾರತ ಅಭಿಯಾನ~ಕ್ಕೆ ಚಾಲನೆ ನೀಡಿದ ರಮೇಶ್, ಶೌಚಾಲಯ ಹೊಂದುವುದು ಮಹಿಳೆಯರ ಪ್ರತಿಷ್ಠೆ ಹಾಗೂ ರಕ್ಷಣೆಗೆ ಸಂಬಂಧಿಸಿದ್ದು ಎಂದರು.

ಜನರಿಗೆ ಸಮರ್ಪಕ ಶೌಚಾಲಯ ಕಲ್ಪಿಸದ ರಾಜಸ್ತಾನ ಸರ್ಕಾರದ ಕಾರ್ಯ ವೈಖರಿಯನ್ನು ರಮೇಶ್ ಟೀಕಿಸಿದರು. ರಾಜಸ್ತಾನದ ರಾಜ್ಯದ 9,177 ಗ್ರಾಮ ಪಂಚಾಯತ್‌ಗಳ ಪೈಕಿ ಕೇವಲ 321 ಮಾತ್ರ ಬಯಲು ಶೌಚಾಲಯ ಮುಕ್ತ ಪಂಚಾಯತ್‌ಗಳಾಗಿವೆ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.