ADVERTISEMENT

`ಮರಣ ದಂಡನೆ ಪರಿಹಾರವಲ್ಲ'

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ನವದೆಹಲಿ (ಐಎಎನ್‌ಎಸ್): `ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಬಹುದಾದರೂ ಇದುವೇ ಪರಿಹಾರ ಎನಿಸದು' ಎಂದು ಅಂತರರಾಷ್ಟ್ರೀಯ ಕ್ಷಮಾದಾನ ಸಂಸ್ಥೆ (ಅಮ್ನೆಸ್ಟಿ)ಯ ಭಾರತೀಯ ಮೂಲದ ಮೊದಲ ಮುಖ್ಯಸ್ಥ ಸಲೀಲ್ ಶೆಟ್ಟಿ ಹೇಳಿದ್ದಾರೆ.

ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ನಂತರ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆ ಜತೆ ಮಾತನಾಡಿದ ಶೆಟ್ಟಿ, `ಈ ಘಟನೆ ದೇಶಕ್ಕೆ ಎಚ್ಚರಿಕೆ ಗಂಟೆಯಂತಿದ್ದು ಈ ಸಂಬಂಧ ನಡೆಯುತ್ತಿರುವ ಉಗ್ರ ಪ್ರತಿಭಟನೆ ನಡೆಯಬೇಕಾದದ್ದೇ' ಎಂದರು. `ಭಾರತದಲ್ಲಿಯ ಈ ಘಟನೆಯಿಂದ ಇತ್ತೀಚೆಗೆ ಅಮೆರಿಕದ ಶಾಲೆಯಲ್ಲಿಯ ಗುಂಡಿನ ದಾಳಿ ಪ್ರಕರಣ ನೆನಪಾಗುತ್ತಿದೆ. ಅಪರಾಧಿಗೆ ಅತ್ಯುಗ್ರ ಶಿಕ್ಷೆ ವಿಧಿಸುವ ಕೆಲವೇ ಕೆಲ ಪಾಶ್ಚಾತ್ಯ ದೇಶಗಳಲ್ಲಿ ಒಂದಾದ ಅಮೆರಿಕದಲ್ಲೂ ಇಂತಹ ಅಮಾನುಷ ಘಟನೆ ತಡೆಯಲು ಆಗಲಿಲ್ಲ, ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಆ ದೇಶದ ಕೆಲ ರಾಜ್ಯಗಳಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಗಣನೀಯವಾಗಿ ಕಡಿಮೆಯಾಗಿದೆ. ಕೆನಡಾದಲ್ಲೂ ಇದೇ ಸ್ಥಿತಿ ಕಾಣಬಹುದು' ಎಂದು ನುಡಿದರು.

`ಜಾಗತಿಕವಾಗಿ 30 ಲಕ್ಷ ಸದಸ್ಯರನ್ನು ಹೊಂದಿರುವ ವಿಶ್ವದ ಹಳೆಯ ಮಾನವ ಹಕ್ಕುಗಳ ಸಂಸ್ಥೆ ತಮ್ಮದಾಗಿದ್ದು, ಯಾವುದೇ ಕಾರಣದಿಂದ ಮರಣದಂಡನೆ ವಿಧಿಸುವುದನ್ನು ವಿರೋಧಿಸುತ್ತದೆ. ಇಂತಹ ಶಿಕ್ಷೆ ನೀಡುವುದಕ್ಕೆ ಯಾವ ಸಮರ್ಥನೆಯನ್ನೂ ನೀಡಲಾಗದು. ಆಕ್ರೋಶದ ಭರದಲ್ಲಿ ಇಂತಹ ಶಿಕ್ಷೆ ವಿಧಿಸಲಾಗದು' ಎಂದು ಶೆಟ್ಟಿ ಅಭಿಪ್ರಾಯಪಟ್ಟರು.

`ದೆಹಲಿಯಲ್ಲಿ ನಡೆದ ಈ ಘಟನೆ ನಿಜಕ್ಕೂ ಭೀಕರ ಅಷ್ಟೇ ಅಲ್ಲ, ಅಮಾನುಷವಾದದ್ದು, ಇಂತಹ ಘಟನೆ ದೇಶದ ಯಾವುದೋ ಮೂಲೆಯಲ್ಲಿ ನಡೆದಿದ್ದರೆ ಅದು ವ್ಯವಸ್ಥೆಯ ಲೋಪ ಎನ್ನಬಹುದಿತ್ತು. ಆದರೆ ರಾಷ್ಟ್ರದ ರಾಜಧಾನಿಯಲ್ಲೇ ಅದೂ ಚಲಿಸುವ ಬಸ್‌ನಲ್ಲಿ ನಡೆದಿರುವುದು ನಿಜಕ್ಕೂ ದುರ್ದೈವದ ಸಂಗತಿ' ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.