ಗ್ಯಾಂಗ್ಟಕ್ (ಪಿಟಿಐ): ಭೂಕಂಪನದಿಂದ ತತ್ತರಿಸಿರುವ ಸಿಕ್ಕಿಂನಲ್ಲಿ ಮರುಕಂಪನಗಳು ಉಂಟಾಗಬಹುದು ಎಂದು ಭೂ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಸಂಭವನೀಯ ಮರುಭೂಕಂಪವು ಭೂ ಮೇಲ್ಮೈ ಧಕ್ಕೆ ಮತ್ತು ಆಕೃತಿಯಲ್ಲಿ ಬದಲಾವಣೆ ಮಾಡುವುದರ ಜೊತೆಗೆ ತೀಸ್ತಾ ನದಿ ಹರಿವಿನ ಮಾರ್ಗದಲ್ಲೂ ಕೆಲವು ವ್ಯತ್ಯಾಸ ಉಂಟುಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 18ರಂದು ಸಂಭವಿಸಿದ ಭೂಕಂಪದ ರಿಕ್ಟರ್ ಪ್ರಮಾಣವು 6.8 ಇದ್ದ ಕಾರಣ, ಈ ವಲಯದಲ್ಲಿ ಮರು ಕಂಪನಗಳು ಆಗುವ ಸಾಧ್ಯತೆ ಇದೆ ಎಂದಿದ್ದಾರೆ.
`ಗಿರಿ ಶ್ರೇಣಿಯಲ್ಲಿ ಭೂಕಂಪಗಳು ಸಂಭವಿಸಿದರೆ ಅದು ಭೂ ಮೇಲ್ಮೈಗೆ ಧಕ್ಕೆಯುಂಟು ಮಾಡುತ್ತವೆ. ಆಕೃತಿಯಲ್ಲೂ ಬದಲಾವಣೆ ಮಾಡುತ್ತವೆ. ಅದರ ಸ್ವರೂಪ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಈಗಲೇ ಅಳೆದು ಹೇಳಲಾಗದು~ ಎಂದು ಸಿಕ್ಕಂನಲ್ಲಿರುವ ಭಾರತೀಯ ಭೂ ಸರ್ವೇಕ್ಷಣಾಯದ ಹಿರಿಯ ಭೂ ವಿಜ್ಞಾನಿ ಪಾರಿತೋಷ್ ಭೌಮಿಕ್ ಸುದ್ದಿಸಂಸ್ಥೆಗೆ ಭಾನುವಾರ ತಿಳಿಸಿದ್ದಾರೆ.
`ತೀಸ್ತಾ ನದಿ ಪಾತ್ರ ತೀವ್ರ ಭೂಕಂಪ ವಲಯ ವ್ಯಾಪ್ತಿಯಿಂದ ಹೊರಗಿದೆ. ಆದರೆ ಈ ಪ್ರದೇಶದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದರೆ ನೀರ್ಗಲ್ಲಿನ ಕೊಳಗಳು ಹೆಚ್ಚಾಗಬಹುದು ಮತ್ತೆ ಕೆಲವು ಕರಗಬಹುದು. ಇದರಿಂದ ನದಿ ಹರಿವಿನ ಮಾರ್ಗದಲ್ಲಿ ಕೆಲವು ಬದಲಾವಣೆ ಆಗುವ ಸಾಧ್ಯತೆ ಇದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
`ಗುರುದಾಂಬಾರ್‌ನಲ್ಲಿರುವ `ಚಾಂಗ್‌ಖೆಂಪು~ ಮತ್ತು `ಜಿಮೊ~ ನೀರ್ಗಲ್ಲು ಕೊಳಗಳು ತೀಸ್ತಾ ನದಿ ಆಕರಗಳು. ಭೂಕಂಪದಿಂದ ಈ ಕೊಳಗಳು ಕರಗಿ ಪ್ರವಾಹ ಉಂಟಾಗಬಹುದು. ಆ ಮೂಲಕ ನದಿ ಹರಿವಿನ ಮಾರ್ಗದಲ್ಲಿ ಕೊಂಚ ಬದಲಾವಣೆ ಸಾಧ್ಯತೆ ಇದೆ. ಆದರೆ ಇವೆಲ್ಲವೂ ಮರುಭೂಕಂಪನದ ಕೇಂದ್ರ ಬಿಂದು ಮತ್ತು ತೀವ್ರತೆಯನ್ನು ಅವಲಂಬಿಸಿರುತ್ತದೆ~ ಎಂದು ಭೌಮಿಕ್ ಹೇಳಿದರು.
ಇಂತಹದ್ದೇ ಅಭಿಪ್ರಾಯವನ್ನು ವಾಡಿಯಾ ಹಿಮಾಲಯ ಭೂವಿಜ್ಞಾನ ಸಂಸ್ಥೆಯ ಸುಶೀಲ್ ಕುಮಾರ್ ಸಹ ವ್ಯಕ್ತಪಡಿಸಿದ್ದಾರೆ -`ಕಂಪನವು ತನ್ನ ಕೇಂದ್ರ ಬಿಂದುವಿನಲ್ಲೇ ತೀವ್ರತರಹವಾಗಿದ್ದರೆ ಪರಿಣಾಮವೂ ತೀವ್ರವಾಗಿರುತ್ತದೆ. ನೀರ್ಗಲ್ಲು ಕೊಳಗಳು ಒಡೆದುಹೋಗಲೂಬಹುದು. ದುರದೃಷ್ಟವೆಂದರೆ ಭೂಕಂಪ ವಲಯದ ಸಮೀಪದಲ್ಲೇ ಇಂತಹ ಅನೇಕ ನೀರ್ಗಲ್ಲು ಕೊಳಗಳಿವೆ.~
ಹಿಮಾಲಯ ಶ್ರೇಣಿಯಲ್ಲಿ ದಿನಕ್ಕೆ ಏನಿಲ್ಲವೆಂದರೂ ಆರು ಬಾರಿಯಾದರೂ ಸಣ್ಣ ಪ್ರಮಾಣದ ಕಂಪನಗಳು ಉಂಟಾಗುತ್ತಲೇ ಇರುತ್ತವೆ ಎಂದು ನೇಪಾಳ ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರ (ಎನ್‌ಎಸ್‌ಸಿ) ಹೇಳಿದೆ.
`ರಿಕ್ಟರ್ ಪ್ರಮಾಣ ಐದು ಅಥವಾ ಅದಕ್ಕಿಂತ ಹೆಚ್ಚಿದ್ದಾಗ ಅದನ್ನು ಮತ್ತು ನಂತರ ಕಂಪನಗಳ ಪ್ರಮಾಣವನ್ನು ದಾಖಲು ಮಾಡಿಕೊಳ್ಳುತ್ತೇವೆ. ಇಂತಹದ್ದು ಹಿಮಾಲಯದಲ್ಲಿ ಸ್ವಾಭಾವಿಕ. ಆದರೆ ಈ ಕಂಪನಗಳು ಇಂತಹದ್ದೇ ನೀರ್ಗಲ್ಲು ಕೊಳದ ಬಳಿ ನಡೆಯುತ್ತದೆ ಎಂದು ನಿಖರವಾಗಿ ಹೇಳಲಾಗದು. ಏಕೆಂದರೆ ಕಂಪನವನ್ನು ಗುರುತಿಸುವ ಸಾಧನೆಗಳನ್ನು ನೀರ್ಗಲ್ಲು ಕೊಳದ ಸನಿಹ ಸ್ಥಾಪಿಸಿಲ್ಲ~ ಎಂದು ಎನ್‌ಸಿಎ ವಿಜ್ಞಾನಿ ದಿಲ್‌ರಾಮ್ ತಿವಾರಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.