ADVERTISEMENT

ಮರು ವಿಚಾರಣೆಗೆ ಒಪ್ಪಿಗೆ

ಪಿಟಿಐ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಮರು ವಿಚಾರಣೆಗೆ ಒಪ್ಪಿಗೆ
ಮರು ವಿಚಾರಣೆಗೆ ಒಪ್ಪಿಗೆ   

ನವದೆಹಲಿ : ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಮರುತನಿಖೆಗೆ ಮನವಿ ಮಾಡಿಕೊಂಡಿರುವ ಅರ್ಜಿಯ ಪರಿಶೀಲನೆಗೆ ನೆರವಾಗಲು ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮರಿಂದರ್ ಶರಣ್ ಅವರನ್ನು ನ್ಯಾಯಾಲಯದ ಸಹಾಯಕರನ್ನಾಗಿ ನೇಮಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಮುಂಬೈ ನಿವಾಸಿ ಮತ್ತು ಅಭಿನವ ಭಾರತ ಸಂಸ್ಥೆಯ ಟ್ರಸ್ಟಿ ಡಾ.ಪಂಕಜ್ ಫಡ್ನಿಸ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಎ.ಬೊಬ್ಡೆ ಮತ್ತು ಎಲ್.ನಾಗೇಶ್ವರ ರಾವ್ ಅವರಿದ್ದ ಪೀಠವು ಈ ನಿರ್ಧಾರ ತೆಗೆದುಕೊಂಡಿದೆ.

ವಿಚಾರಣೆಯ ಆರಂಭದಲ್ಲಿ ಪೀಠವು ‘ಪ್ರಕರಣವು ಬಹಳ ಹಿಂದೆಯೇ ಇತ್ಯರ್ಥವಾಗಿದೆ. ಈಗ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿತು.

ADVERTISEMENT

ಆದರೆ ಫಡ್ನಿಸ್ ಅವರು ಮರುತನಿಖೆಯ ಅಗತ್ಯವನ್ನು ಪೀಠಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. ‘ಹಲವು ಆಯಾಮಗಳಲ್ಲಿ ಮತ್ತೆ ತನಿಖೆ ನಡೆಯಬೇಕಿದೆ. ಇದು ಹಲವು ಸತ್ಯಗಳನ್ನು ಮರೆಮಾಚಿರುವ ದೊಡ್ಡ ಪ್ರಕರಣ. ಪ್ರಕರಣದ ಮರುತನಿಖೆ ಆರಂಭಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮನವರಿಕೆ ಮಾಡಿಕೊಡಲು ಕೆಲವು ದಾಖಲೆಗಳ ಅಗತ್ಯವಿದೆ. ಅವನ್ನು ನ್ಯಾಯಾಲಯದ ಮುಂದೆ ಇರಿಸಲು ಸ್ವಲ್ಪ ಸಮಯಾವಕಾಶ ಬೇಕು’ ಎಂದು ಅವರು ಮನವಿ ಮಾಡಿಕೊಂಡರು.

ದಾಖಲೆಗಳನ್ನು ನೀಡಲು ಸಮಯಾವಕಾಶ ಕೊಡಬಹುದು. ಆದರೆ ಗಾಂಧೀಜಿ ಹತ್ಯೆಯ ಮರುತನಿಖೆ ಅಗತ್ಯ ಎಂಬುದನ್ನು ನೀವು ಸಾಬೀತು ಮಾಡಬೇಕಾಗುತ್ತದೆ ಎಂದು ಪೀಠ ಹೇಳಿತು.

‘ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರ ಮೇಲ್ಮನವಿಯನ್ನು ಪೂರ್ವ ಪಂಜಾಬ್ ಹೈಕೋರ್ಟ್‌ 1949ರಲ್ಲಿ ತಿರಸ್ಕರಿಸಿತ್ತು. ಸುಪ್ರೀಂ ಕೋರ್ಟ್‌ ರಚನೆಯಾಗಿದ್ದೇ 1950ರ ಜನವರಿಯಲ್ಲಿ. ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ವಿಚಾರಣೆಗೆ ಬಂದೇ ಇಲ್ಲ. ಗಾಂಧಿಯವರತ್ತ ಗುಂಡು ಹಾರಿಸುವಲ್ಲಿ ನಾಥೂರಾಂ ಗೋಡ್ಸೆ ಅಲ್ಲದೆ ಮತ್ತೊಬ್ಬ ವ್ಯಕ್ತಿ ಭಾಗಿಯಾಗಿರಬಹುದು. ಹತ್ಯೆಯ ಹಿಂದೆ ಸಂಘಟನೆಯೊಂದರ ಕೈವಾಡ ಇದ್ದಿರಬಹುದು’ ಎಂದು ಫಡ್ನಿಸ್‌ ಹೇಳಿದರು.

‘ಗಾಂಧಿ ಹತ್ಯೆಯಲ್ಲಿ ಮೂರನೇ ವ್ಯಕ್ತಿಯೊಬ್ಬ ಭಾಗಿಯಾಗಿದ್ದ ಎಂದು ನೀವು ಹೇಳುತ್ತಿದ್ದೀರಿ. ವಿಚಾರಣೆ ಎದುರಿಸಲು ಆ ವ್ಯಕ್ತಿ ಈಗ ಬದುಕಿದ್ದಾನೆಯೇ? ನಾವು ಯಾವುದೇ ಸಂಘಟನೆಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ನೀವು ಹೇಳಿದ ವ್ಯಕ್ತಿ ಬದುಕಿದ್ದಾನೆಯೇ ಇಲ್ಲವೇ ಎಂಬುದು ನಿಮಗೆ ತಿಳಿದಿದೆಯೇ’ ಎಂದು ಕೇಳಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಫಡ್ನಿಸ್‌ ಅವರು,  ‘ಆ ವ್ಯಕ್ತಿ ಬದುಕಿದ್ದಾನೆಯೇ ಇಲ್ಲವೇ ಎಂಬುದು ತಿಳಿದಿಲ್ಲ. ಆದರೆ ಸತ್ಯವನ್ನು ಕಂಡುಕೊಳ್ಳಬೇಕು ಎಂಬುದೇ ಮರುತನಿಖೆಗೆ ಆಗ್ರಹಿಸುತ್ತಿರುವುದರ ಹಿಂದಿನ ಉದ್ದೇಶ’ ಎಂದು ವಿವರಣೆ ನೀಡಿದರು.

ಪ್ರಕರಣದ ವಿಚಾರಣೆಗೆ ಒಪ್ಪಿಗೆ ಸೂಚಿಸಿದ ಪೀಠ, ಹಿರಿಯ ವಕೀಲ ಅಮರಿಂದರ್‌ ಶರಣ್‌ ಅವರನ್ನು ನ್ಯಾಯಾಲಯದ ಸಹಾಯಕರನ್ನಾಗಿ ನೇಮಕ ಮಾಡಿತು. ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.