ADVERTISEMENT

ಮಲಯಾಳ ನಿರ್ದೇಶಕ ಐ.ವಿ. ಶಶಿ ನಿಧನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ಮಲಯಾಳ ನಿರ್ದೇಶಕ ಐ.ವಿ. ಶಶಿ ನಿಧನ
ಮಲಯಾಳ ನಿರ್ದೇಶಕ ಐ.ವಿ. ಶಶಿ ನಿಧನ   

ಚೆನ್ನೈ: ಮಲಯಾಳದ ಜನಪ್ರಿಯ ಸಿನಿಮಾ ನಿರ್ದೇಶಕ ಐ.ವಿ. ಶಶಿ (69) ಅವರು ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶಶಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೇ ಸಾವನ್ನಪ್ಪಿದ್ದಾರೆ.

ಮೂರು ದಶಕಗಳ ಕಲಾಬದುಕಿನಲ್ಲಿ ಶಶಿ ಅವರು ಮಲಯಾಳ, ತಮಿಳು, ತೆಲುಗು, ಹಿಂದಿ ಸೇರಿ 150ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ರಜನಿಕಾಂತ್, ಮೋಹನ್‌ ಲಾಲ್, ಮಮ್ಮೂಟಿ, ಕಮಲ್ ಹಾಸನ್ ಸೇರಿದಂತೆ ತಾರಾ ಕಲಾವಿದರೊಂದಿಗೆ ಅವರು ಕೆಲಸ ಮಾಡಿದ್ದರು.

ADVERTISEMENT

1948 ಮಾರ್ಚ್ 28ರಂದು ಕೋಯಿಕ್ಕೋಡ್‌ನಲ್ಲಿ ಜನಿಸಿದ ಶಶಿ ಅವರು ಕಲಾ ನಿರ್ದೇಶಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಅವರ ನಿರ್ದೇಶನದ ಮೊದಲ ಚಿತ್ರ ‘ಉತ್ಸವಮ್’ 1975ರಲ್ಲಿ ತೆರೆಕಂಡಿತ್ತು. 1978ರಲ್ಲಿ ತೆರೆಕಂಡ ‘ಅವಳುಡೆ ರಾವುಗಳ್’ ನಿರ್ದೇಶಕನಾಗಿ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಮೊದಲ ಚಿತ್ರ.

ಶಶಿ ನಿರ್ದೇಶನದ ‘ಇನಿಯೆಂಗಿಲುಮ್’ ಚಿತ್ರದ ಮೂಲಕ ಮಮ್ಮೂಟ್ಟಿ ಅವರು ಪ್ರಾರಂಭಿಕ ಯಶಸ್ಸು ಕಂಡಿದ್ದರು. ನಂತರ ಇವರಿಬ್ಬರು ಜೊತೆಯಾಗಿ 35ಕ್ಕೂ ಹೆಚ್ಚು ಸಿನಿಮಾ ಮಾಡಿದರು.

1982ರಲ್ಲಿ ‘ಆರೂಡಂ’ ಚಿತ್ರ ನಿರ್ದೇಶನಕ್ಕಾಗಿ ಶಶಿ ಅವರು ‘ಅತ್ಯುತ್ತಮ ಕಥಾ ಚಿತ್ರ’ ನರ್ಗಿಸ್ ದತ್ ಪ್ರಶಸ್ತಿ ಪಡೆದಿದ್ದಾರೆ.

‘ದೇವಾಸುರಂ’, ‘ಉಯರಂಙಳಿಲ್’, ‘ಕರಿಷ್ಮಾ’, ‘ಈ ನಾಡು’, ‘ಈಟ್ಟ’, ‘ಮೃಗಯಾ’, ‘ಅಲ್ಲಾವುದ್ದಿನುಮ್ ಅಲ್ಭುಧ ವಿಳಕ್ಕುಂ’, ‘ಪತಿತ’, ‘ಅನೋಖಾ ರಿಶ್ತಾ’ ಮುಂತಾದವು ಶಶಿ ಅವರ ನಿರ್ದೇಶನದಲ್ಲಿ ಮೂಡಿಬಂದ ಪ್ರಮುಖ ಸಿನಿಮಾಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.