ADVERTISEMENT

ಮಳೆಗೆ ನಲುಗಿದ ಉತ್ತರ ಭಾರತ

60ಕ್ಕೂ ಹೆಚ್ಚು ಜನ ಸಾವು: ಪ್ರಮುಖ ನದಿಗಳಲ್ಲಿ ಪ್ರವಾಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST
ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಂಭವಿಸಿದ ಪ್ರವಾಹದಲ್ಲಿ ಹೃಷಿಕೇಶ ನಗರದಲ್ಲಿರುವ ಶಿವನ ಮೂರ್ತಿ ಭಾಗಶಃ ಮುಳುಗಿರುವ ದೃಶ್ಯ ಸೋಮವಾರ ಕಂಡುಬಂತು	- ಎಎಫ್‌ಪಿ ಚಿತ್ರ
ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಂಭವಿಸಿದ ಪ್ರವಾಹದಲ್ಲಿ ಹೃಷಿಕೇಶ ನಗರದಲ್ಲಿರುವ ಶಿವನ ಮೂರ್ತಿ ಭಾಗಶಃ ಮುಳುಗಿರುವ ದೃಶ್ಯ ಸೋಮವಾರ ಕಂಡುಬಂತು - ಎಎಫ್‌ಪಿ ಚಿತ್ರ   

ನವದೆಹಲಿ (ಪಿಟಿಐ): ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರ ಭಾರತ ತತ್ತರಿಸಿದ್ದು, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣದಲ್ಲಿ ಭಾರಿ ಸಾವು-ನೋವು ಸಂಭವಿಸಿದೆ.

ಯಮುನಾ ಸೇರಿದಂತೆ ಈ ರಾಜ್ಯಗಳ ಪ್ರಮುಖ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಭೂಕುಸಿತ ಮತ್ತು ನೆರೆಯಿಂದಾಗಿ 60ಕ್ಕೂ ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಏರುವ ನಿರೀಕ್ಷೆ ಇದೆ.ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, ಪ್ರತಿಕೂಲ ಹವಾಮಾನದಿಂದ ಹಲವು ಕಡೆಗಳಲ್ಲಿ ಪರಿಹಾರ ಕಾರ್ಯಕ್ಕೆ ಅಡಚಣೆಯಾಗಿದೆ.

ಉತ್ತರಾಖಂಡ- 30 ಸಾವು (ಡೆಹ್ರಾಡೂನ್ ವರದಿ):  ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿ ಉತ್ತರಾಖಂಡದಲ್ಲಿ 30 ಜನರು ಮೃತಪಟ್ಟಿದ್ದಾರೆ. 19 ಜನ ಗಾಯಗೊಂಡಿದ್ದಾರೆ.164ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದೆ.  ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಇನ್ನೂ ಭಾರಿ ಮಳೆಯಾಗಲಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮಳೆಯ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ ಮತ್ತಿತರ ಪುಣ್ಯಕ್ಷೇತ್ರಗಳ ಯಾತ್ರೆಯನ್ನು  ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ವಾರ್ಷಿಕವಾಗಿ ನಡೆಯುವ ಕೈಲಾಸ ಮಾನಸ ಸರೋವರ ಯಾತ್ರೆಯನ್ನೂ ಸ್ಥಗಿತಗೊಳಿಸಲಾಗಿದೆ. ಈ ಪವಿತ್ರ ಕ್ಷೇತ್ರಗಳಿಗೆ ಯಾತ್ರೆ ತೆರಳಿರುವ ಸಾವಿರಾರು ಯಾತ್ರಾರ್ಥಿಗಳು ಮಾರ್ಗ ಮಧ್ಯೆ ಸಿಲುಕಿಕೊಂಡಿದ್ದಾರೆ. 

ತುಂಬಿ ಹರಿಯುತ್ತಿರುವ ನದಿಗಳು: ಭಾರಿ ಮಳೆಯ ಕಾರಣದಿಂದ ಗಂಗಾ, ಯಮುನಾ ಹಾಗೂ ಅವುಗಳ ಉಪನದಿಗಳಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಪ್ರವಾಹಕ್ಕೆ ಸಿಲುಕಿ ರಸ್ತೆಗಳು, ಸೇತುವೆಗಳು, ಕಟ್ಟಡಗಳು ಕೊಚ್ಚಿಹೋಗಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ.

ಹರಿಯಾಣ ವರದಿ: ಹರಿಯಾಣದಲ್ಲೂ ಭಾರಿ ಮಳೆಯಾಗುತ್ತಿದ್ದು, ಯಮುನಾನಗರ ಜಿಲ್ಲೆಯು ನೆರೆಯಿಂದ ತತ್ತರಿಸಿದೆ.  ಪ್ರವಾಹದಲ್ಲಿ ಸಿಲುಕಿದ್ದ 15 ಮಕ್ಕಳು ಸೇರಿದಂತೆ 50 ಜನರನ್ನು  ರಕ್ಷಿಸಲಾಗಿದೆ.

ಮಾರ್ಗ ಮಧ್ಯೆ ಹರಭಜನ್ (ಡೆಹ್ರಾಡೂನ್ ವರದಿ): ಮಳೆ ಹಾಗೂ ಭೂ ಕುಸಿತದಿಂದಾಗಿ ಉತ್ತರಾಖಂಡದಲ್ಲಿ ಮಾರ್ಗ ಮಧ್ಯೆ ಸಿಲುಕಿರುವ ಯಾತ್ರಾರ್ಥಿಗಳಲ್ಲಿ ಕ್ರಿಕೆಟಿಗ ಹರಭಜನ್ ಸಿಂಗ್ ಕೂಡ ಸೇರಿದ್ದಾರೆ.

ಸಿಂಗ್ ಅವರು ಈಗ ಜೋಶಿಮತ್‌ನಲ್ಲಿರುವ ಭಾರತ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ಭಾನುವಾರದಿಂದ ಅವರು ಗಡಿ ಕಾಯುತ್ತಿರುವ ಯೋಧರ ಆಶ್ರಯದಲ್ಲಿದ್ದಾರೆ.

ಡೆಹ್ರಾಡೂನ್‌ನ ಹೇಮಕುಂಡ್ ಗುರುದ್ವಾರಕ್ಕೆ ಭೇಟಿ ನೀಡಿದ್ದ ಹರಭಜನ್ ಸಿಂಗ್ ಅವರು ಅಲ್ಲಿಂದ ಹಿಂದಿರುಗುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಿಕ್ಕಿಹಾಕಿಕೊಂಡಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT