ದಾತಿಯಾ (ಮಧ್ಯ ಪ್ರದೇಶ) (ಪಿಟಿಐ): ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ರತನ್‌ಗಡದಲ್ಲಿ ಭಾನುವಾರ ನವರಾತ್ರಿ ಉತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ 115ಕ್ಕೆ ಏರಿದೆ.

ಗಾಯಾಳುಗಳ ಸಂಖ್ಯೆ ನೂರನ್ನು ಮೀರಿದೆ.
ಘಟನಾ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹೆಣಗಳ ರಾಶಿ, ರಕ್ತದ ಕಲೆಗಳಿಂದಾಗಿ ಉತ್ಸವ ಸ್ಥಳ ಸ್ಮಶಾನ ಸದೃಶ್ಯವಾಗಿ ಪರಿಣಮಿಸಿತ್ತು.
ಭಾನುವಾರ ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಸಿಂಧ್ ನದಿಯ ಸೇತುವೆ ದಾಟುತ್ತಿದ್ದ ವೇಳೆ ಕೆಲವು ಅಪರಿಚಿತ ವ್ಯಕ್ತಿಗಳು ‘ಸೇತುವೆ ಕುಸಿಯುತ್ತಿದೆ’ ಎಂಬ ಗಾಳಿ ಸುದ್ದಿ ಹರಡಿದರು. ಹಠಾತ್ ಸುದ್ದಿಯಿಂದ ಭಯಭೀತರಾದ ಸಾವಿರಾರು ಜನರು ಕಂಗಾಲಾಗಿ ದಿಕ್ಕಾಪಾಲಾಗಿ ಓಡತೊಡಗಿದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಈವರೆಗೆ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 115 ಕ್ಕೆ ಏರಿದ್ದು, ಆ ಪೈಕಿ 31 ಮಹಿಳೆಯರು ಮತ್ತು 17 ಮಕ್ಕಳು ಸೇರಿದ್ದಾರೆ.
ಭೋಪಾಲ್‌ನಿಂದ 320 ಕಿ.ಮೀ ದೂರದಲ್ಲಿರುವ ರತನ್‌ಗಡದಲ್ಲಿ ಪ್ರತಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ದುರ್ಗಾದೇವಿಯ ಪೂಜೆಗೆ ನೆರೆಯ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸೇರುತ್ತಾರೆ.
ಉತ್ತರ ಪ್ರದೇಶದ ಝಾನ್ಸಿಯಿಂದ ಕೆಲವೇ ಕಿ.ಮೀ ದೂರದಲ್ಲಿರುವ ಕಾರಣ ಇಲ್ಲಿಗೆ ಆಗಮಿಸುವವರಲ್ಲಿ ಉತ್ತರ ಪ್ರದೇಶದ ಭಕ್ತರ ಸಂಖ್ಯೆ ಹೆಚ್ಚು. ಹೀಗಾಗಿ ದುರಂತದಲ್ಲಿ ಮೃತಪಟ್ಟವರ ಪೈಕಿ ಈ ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಷ್ಟೊಂದು ಜನರು ಸೇರುವ ನಿರೀಕ್ಷೆ ಇದ್ದರೂ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸದಿರುವುದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ರೊಚ್ಚಿಗೆದ್ದ ಜನರು ಘಟನೆ ಖಂಡಿಸಿ ಪ್ರತಿ ಭಟನೆ ನಡೆಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.