ADVERTISEMENT

ಮಹಾರಾಜರ ಪ್ರತಿಷ್ಠೆ: ಸಾಮಾನ್ಯರ ಭರಾಟೆ

ಹೊನಕೆರೆ ನಂಜುಂಡೇಗೌಡ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಪ್ರಜಾವಾಣಿ ಸಾಕ್ಷಾತ್ ಸಮೀಕ್ಷೆ

 ಪಟಿಯಾಲ: ಪಂಜಾಬ್ ವಿಧಾನಸಭೆ ಚುನಾವಣೆ ಪಟಿಯಾಲ ರಾಜ ಮನೆತನದವರಿಗೆ ಪ್ರತಿಷ್ಠೆ ಪ್ರಶ್ನೆ. `ಪಟಿಯಾಲ ಮಹಾರಾಜ~ ಕ್ಯಾ. ಅಮರೀಂದರ್ ಸಿಂಗ್, ಅವರ ಮಗ ರಣಿಂದರ್ ಸಿಂಗ್ ಸೇರಿದಂತೆ ಈ ಮನೆತನದ ಮೂವರು ಚುನಾವಣೆ ಕಣದಲ್ಲಿದ್ದಾರೆ. ಅಮರೀಂದರ್ ಸ್ವತಃ ಗೆಲ್ಲುವುದರ ಜತೆಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಕಾಂಗ್ರೆಸ್ ಗೆದ್ದು ಅವರು ಸೋತರೆ ಪ್ರಯೋಜನವಿಲ್ಲ ಅಥವಾ ಅವರು ಗೆದ್ದು ಪಕ್ಷ ಸೋತರೂ ಲಾಭವಿಲ್ಲ. ಈ ಕಾರಣಕ್ಕೆ ಅವರಿಗೆ ಇದು ಮಹತ್ವದ ಚುನಾವಣೆ.

ಕಾಂಗ್ರೆಸ್ `ಮುಖ್ಯಮಂತ್ರಿ ಅಭ್ಯರ್ಥಿ~ ಎಂದು ಯಾರನ್ನೂ ಬಿಂಬಿಸದಿದ್ದರೂ, `ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗುತ್ತಾರೆ~ ಎಂಬ ಚರ್ಚೆ ಈಗಾಗಲೇ ಆರಂಭವಾಗಿದೆ. ಚುನಾವಣೆ ನೇತೃತ್ವ ವಹಿಸಿರುವ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಇವರ ಪತ್ನಿ ವಿದೇಶಾಂಗ ಖಾತೆ ರಾಜ್ಯ ಸಚಿವೆ ಪ್ರಣೀತ್ ಕೌರ್, ಕೇಂದ್ರ ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ, ವಿರೋಧ ಪಕ್ಷದ ನಾಯಕಿ ರಾಜೀಂದರ್ ಕೌರ್ ಭಟ್ಟಲ್ ಹೆಸರುಗಳು ಚಲಾವಣೆಯಲ್ಲಿವೆ.

ಎರಡು ಸಲ ಪಟಿಯಾಲ ಶಹರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಅಮರೀಂದರ್ ಮೂರನೇ ಬಾರಿಗೆ ಕಣದಲ್ಲಿದ್ದಾರೆ. ಹಾಗೇ 2ನೇ ಸಲ ಮುಖ್ಯಮಂತ್ರಿ ಕುರ್ಚಿ ಬಳಿಗೆ ಬಂದು ನಿಂತಿದ್ದಾರೆ. ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದು 2002 ರ ಕಾಂಗ್ರೆಸ್ ಸರ್ಕಾರದಲ್ಲಿ. ರಾಜ್ಯದಲ್ಲಿ ಪಕ್ಷ ಗೆಲ್ಲಿಸಬೇಕಾದ ಹೊಣೆ ಹೊತ್ತಿರುವುದರಿಂದ `ಮಹಾರಾಜ~ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯುತ್ತಿಲ್ಲ.

`ಇಡೀ ರಾಜ್ಯ ಸುತ್ತಿ ಪಕ್ಷದ ಪರ ಪ್ರಚಾರ ಮಾಡುತ್ತಿರುವುದರಿಂದ ಹೆಚ್ಚು ಸಮಯ ಪಟಿಯಾಲದಲ್ಲಿ ಕಳೆಯಲು ಆಗುತ್ತಿಲ್ಲ~ ಎಂದು ಪಿಸಿಸಿ ಅಧ್ಯಕ್ಷರು ಹೇಳುತ್ತಿದ್ದಾರೆ. ಗಂಡನ ಪರ ಪ್ರಣೀತ್ ಕೌರ್, ಪುತ್ರಿ ಜೈ ಇಂದರ್ ಕೌರ್ ಪ್ರಚಾರ ಮಾಡುತ್ತಿದ್ದಾರೆ. `ಅಮರೀಂದರ್ ಸಿಂಗ್ ಗೆದ್ದರೆ ಮುಖ್ಯಮಂತ್ರಿ ಆಗುತ್ತಾರೆ~ ಎಂದು ಹೇಳುತ್ತಿದ್ದಾರೆ.

ಏಳು ಚುನಾವಣೆಗಳಲ್ಲಿ ಐದು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ `ಕೈ~ಗೆ ನಿಷ್ಠವಾಗಿರುವ ಪಟಿಯಾಲ ಹಿಂದಿನ ಸಲ ಕ್ಯಾಪ್ಟನ್ ಅವರನ್ನು ಸುಮಾರು 33 ಸಾವಿರ ಮತಗಳ ಅಂತರದಿಂದ ಆರಿಸಿ ಕಳುಹಿಸಿತ್ತು. `ಈ ಸಲವೂ ಅವರು ಗೆಲುವು ನಿಶ್ಚಿತ~ ಎಂಬ ಆತ್ಮ ವಿಶ್ವಾಸದ ಮಾತುಗಳನ್ನು ಕಾಂಗ್ರೆಸ್ ಮುಖಂಡರು ಆಡುತ್ತಿದ್ದಾರೆ.

`ಪಟಿಯಾಲ ರಾಜಮನೆತನ ಬ್ರಿಟೀಷರ ಪರ ನಿಂತರೂ ಜನರಿಗೆ ಅವರ ಮೇಲಿನ ಗೌರವ- ನಿಷ್ಠೆ ಕಡಿಮೆಯಾಗಿಲ್ಲ. ಮತದಾರನ ಪಾಲಿಗೆ ಅಮರೀಂದರ್ ಈಗಲೂ ಮಹಾರಾಜ. ಪತ್ನಿ ಪ್ರಣೀತ್ `ಮಹಾರಾಣಿ~, ಪುತ್ರ ರಣೀಂದರ್ `ಯುವರಾಜ~. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ  ಎಲ್ಲ ಹಿರಿಮೆ- ಗರಿಮೆಗಳನ್ನು ಬಿಡಬೇಕೆಂದು ಹೇಳಿದ್ದರೂ `ಪಟಿಯಾಲ ಸಾಮ್ರಾಜ್ಯ~ದಲ್ಲಿ ಇದ್ಯಾವುದೂ ಜಾರಿಯಾಗಿಲ್ಲ~ ಎಂಬುದು ಕ್ಷೇತ್ರದ ಸುಖ್‌ಜೀಂದರ್ ಕೌರ್ ಅಭಿಪ್ರಾಯ.

`ಮಹಾರಾಜ ಪಂಜಾಬಿಗೆ ಏನು ಮಾಡಿದ್ದಾರೆ ಅಥವಾ ಬಿಟ್ಟಿದ್ದಾರೆಂಬುದು ನಮಗೆ ಗೊತ್ತಿಲ್ಲ. ಪಟಿಯಾಲಕ್ಕೆ ಬೇಕಾದಷ್ಟು ಮಾಡಿದ್ದಾರೆ. ಐದು ವರ್ಷದಿಂದ ಆಡಳಿತ ನಡೆಸುತ್ತಿರುವ ಅಕಾಲಿದಳ ಸರ್ಕಾರ ಏನೂ ಮಾಡಿಲ್ಲ~ ಎಂದು ಇಲೆಕ್ಟ್ರಾನಿಕ್ ಉಪಕರಣಗಳ ವ್ಯಾಪಾರಿ  ಜೀವನ್ ಗುಪ್ತ ಹೇಳುತ್ತಾರೆ. `ಈ ರಸ್ತೆ ಹೇಗಿದೆ ನೋಡಿ~ ಎಂದು ಅಂಗಡಿ ಮುಂದಿನ ಕಲ್ಲು- ಮಣ್ಣಿನ ರಸ್ತೆಯನ್ನು ತೋರಿಸುತ್ತಾರೆ.

“ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ `ಲಂಬಿ~ ಹೇಗೋ ನಮ್ಮ ಮಹಾರಾಜರಿಗೆ ಪಟಿಯಾಲವೂ ಹಾಗೆ . ಅವರನ್ನು ಬಿಟ್ಟು ಬೇರೆ ಯಾರಿಗೆ ವೋಟು ಕೊಡಬೇಕು” ಎಂದು ಮತ್ತೊಬ್ಬ ಮತದಾರ ಅವತಾರ್‌ಸಿಂಗ್ ಕೇಳುತ್ತಾರೆ. ಇವರಿಗೆ ಎಲ್ಲೋ ಮನಸಿನಾಳದಲ್ಲಿ ಕ್ಯಾಪ್ಟನ್ ಗೆದ್ದರೆ ಮುಖ್ಯಮಂತ್ರಿ ಆಗುತ್ತಾರೆಂಬ ನಿರೀಕ್ಷೆ ಇದ್ದಂತಿದೆ.

`ಪಟಿಯಾಲದ ಪ್ರತಿಯೊಬ್ಬರೂ ಅಮರೀಂದರ್ ಪರ ಮಾತನಾಡುವುದಿಲ್ಲ. ವಿರೋಧ ಮಾಡುವ ಬೇಕಾದಷ್ಟು ಜನರಿದ್ದಾರೆ `ಮಹಾರಾಜ ಗೆದ್ದು ಅರಮನೆಯೊಳಕ್ಕೆ ಸೇರಿಕೊಂಡರೆ ಹುಡುಕಿಕೊಂಡು ಹೋಗಲು ಸಾಧ್ಯವೇ. ನಮ್ಮನ್ನು ಒಳಗೆ ಬಿಡುತ್ತಾರೆಯೇ~ ಎಂದು ನಿರ್ಮಲ್ ಸಿಂಗ್ ಕೇಳುತ್ತಾರೆ. ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಸುರ್ಜಿತ್‌ಸಿಂಗ್ ಕೊಹ್ಲಿ, ಅಮರೀಂದರ್ ದೌರ್ಬಲ್ಯಗಳನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.
 
`ಮಹಾರಾಜರಿಗೆ ವೋಟು ಕೊಟ್ಟರೆ ನಿಮ್ಮ ಕೈಗೆ ಸಿಗುವುದಿಲ್ಲ. ಮಿಲಿಟರಿ ಮನೋಭಾವ ಬಿಡದ ಕ್ಯಾಪ್ಟನ್ ಸರ್ವಾಧಿಕಾರಿ~ ಎಂದು ಭರಾಟೆ ಪ್ರಚಾರ ಮಾಡುತ್ತಿದ್ದಾರೆ. ಸುರ್ಜಿತ್‌ಸಿಂಗ್ ಬಿಚ್ಚಿಡುತ್ತಿರುವ ಸಂಗತಿ ಪಟಿಯಾಲದ ಜನರಿಗೂ ಗೊತ್ತಿದೆ.

ಇದೇ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಪಕ್ಕದ ಸಮಾನ ಕ್ಷೇತ್ರದಲ್ಲಿ ಮಹಾರಾಜರ ಮಗ ಯುವರಾಜ ರಣೀಂದರ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿ. ಮಗನಿಗೆ ಟಿಕೆಟ್ ಕೊಟ್ಟಿರುವುದರಿಂದ ಅಮರೀಂದರ್ ಸೋದರ ಮಲ್ವಿಂದರ್ ಅಣ್ಣನ ಜತೆ ಮನಸ್ತಾಪ ಮಾಡಿಕೊಂಡು ಅಕಾಲಿದಳ ಸೇರಿದ್ದಾರೆ.

`ನನಗೆ ಟಿಕೆಟ್ ನಿರಾಕರಿಸಲು ಅತ್ತಿಗೆ ಪ್ರಣೀತ್ ಕಾರಣ~ ಎಂದು ಮಲ್ವಿಂದರ್ ಹೇಳುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ಸೋದರ ಅಕಾಲಿದಳ ಸೇರಿರುವುದರಿಂದ ಬಲ ಬಂದಿದೆ. ಇದೊಂದು ಅಣು ಬಾಂಬ್. ಇದನ್ನು ಪ್ರಯೋಗ ಮಾಡುವುದರಿಂದ ಕಾಂಗ್ರೆಸ್ ಸರ್ವನಾಶ ಆಗಲಿದೆ~ ಎಂದು ಸುಖ್‌ಬೀರ್ ಸಿಂಗ್ ಪ್ರತಿಪಾದಿಸುತ್ತಿದ್ದಾರೆ. ರಾಜ ಮನೆತನದ ಕುಟುಂಬ ಕಲಹವನ್ನು ಎಲ್ಲೆಡೆ ಬಿಚ್ಚಿಡುತ್ತಿದ್ದಾರೆ.

ರಣದೀರ್ ಸಮಾನಕ್ಕೆ ಹೊಸ ಮುಖ. ಯುವರಾಜನಾಗಿದ್ದರೂ ತಾಯಿತಂದೆ ಹೆಸರಿನ ಮೇಲೇ ಚುನಾವಣೆಗೆ ಹೊರಟಿದ್ದಾರೆ. ಈತನ ವಿರುದ್ಧ ಸುರ್ಜಿತ್‌ಸಿಂಗ್ ರಕ್ಡ ಅಕಾಲಿದಳ ಅಭ್ಯರ್ಥಿ. ಹಿಂದಿನ ಚುನಾವಣೆಯಲ್ಲಿ ಸೋತಿದ್ದಾರೆ. ಆದರೂ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ~ ಎಂದು ಮಲ್ಕಿನ್‌ಸಿಂಗ್, ನಚಿತ್ತರ್ ಸಿಂಗ್ ವಿವರಿಸುತ್ತಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಣೀಂದರ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್  `ಬಟಿಂಡ~ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತಿದ್ದಾನೆ. ಮುಖ್ಯಮಂತ್ರಿ ಸೊಸೆ ಹರ್‌ಸಿಮ್ರತ್ ಕೌರ್ 1.20 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಇವರನ್ನು ಮಣಿಸಿದ್ದಾರೆ. ಈ ಸಲ ರಣೀಂದರ್ ಗೆಲುವು ಸುಲಭವಲ್ಲ.

ಇದೇ ಜಿಲ್ಲೆಯ ದೂರಿಯಲ್ಲಿ ಅಮರೀಂದರ್ ಅತ್ತೆ ಮಗ ಅರವಿಂದ್ ಖನ್ನ ಕಾಂಗ್ರೆಸ್ ಅಭ್ಯರ್ಥಿ, ಅಕಾಲಿದಳ ಅಭ್ಯರ್ಥಿ ಮಾಜಿ ಸಚಿವ ಗೋವಿಂದ್‌ಸಿಂಗ್ ಲೋಂಗವಾಲ್, ಪಿಪಿಪಿ ಸುರ್ಜಿತ್‌ಸಿಂಗ್ ಬರ್ನಾಲ ಅವರ ಪುತ್ರ ಗಗನ್‌ಸಿಂಗ್ ಬರ್ನಾಲ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಮೂವರೂ ಹೊಸಬರು. ಹೀಗಾಗಿ ಮತದಾರನಿಗೆ ಆಯ್ಕೆ ಕಷ್ಟವಾಗಲಾರದು. ಪಟಿಯಾಲ ಚುನಾವಣೆ ರಾಜ ಮನೆತನದವರಿಗೆ ಅಗ್ನಿ ಪರೀಕ್ಷೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT