ADVERTISEMENT

ಮಹಾರಾಷ್ಟ್ರದಿಂದ ರಾಜ್ಯಕ್ಕೆ 2 ಟಿಎಂಸಿ ನೀರು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ಮುಂಬೈ:  ಅವಧಿಗೆ ಮುನ್ನವೇ ಕೃಷ್ಣಾ ನದಿ ಬತ್ತಿರುವುದರಿಂದ ಗಡಿ ಭಾಗದಲ್ಲಿ ಉಂಟಾಗಿರುವ ತೀವ್ರ ಸಂಕಷ್ಟ ಸ್ಥಿತಿ ಶಮನಕ್ಕೆ ಮಹಾರಾಷ್ಟ್ರ ಮುಂದೆ ಬಂದಿದ್ದು, 1.9ರಿಂದ 2 ಟಿಎಂಸಿ ಕುಡಿಯುವ ನೀರನ್ನು ಕರ್ನಾಟಕಕ್ಕೆ ಹರಿಸಲು ತಾತ್ವಿಕ ಒಪ್ಪಿಗೆ ನೀಡಿದೆ.

ಈ ಸಂಬಂಧ ಇಲ್ಲಿನ ವಿಧಾನ ಭವನದಲ್ಲಿ ಬುಧವಾರ ಎರಡೂ ರಾಜ್ಯಗಳ ಉನ್ನತ ಮಟ್ಟದ ಸಭೆ ನಡೆದಿದ್ದು ಕೃಷ್ಣಾ ಜಲ ನ್ಯಾಯ ಮಂಡಳಿಯ ಒಪ್ಪಂದದಂತೆ ಕರ್ನಾಟಕಕ್ಕೆ ನೀರು ಬಿಡಲಾಗುವುದು ಎಂದು ಮಹಾರಾಷ್ಟ ಸರ್ಕಾರ ತಿಳಿಸಿದೆ.

ಕರ್ನಾಟಕ 4 ಟಿಎಂಸಿ ಕುಡಿಯುವ ನೀರಿಗೆ ಬೇಡಿಕೆ ಇಟ್ಟಿದ್ದು, ಆದರೆ ಎಷ್ಟು ಪ್ರಮಾಣದ ನೀರನ್ನು ಬಿಡಬೇಕೆನ್ನುವ ಕುರಿತು ಇನ್ನೂ ಅಂತಿಮ ನಿರ್ಣಯ ಕೈಗೊಳ್ಳಲಾಗಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ತೀವ್ರ ಬರ ಇರುವುದರಿಂದ ಕನಿಷ್ಠ 4 ಟಿಎಂಸಿ ನೀರನ್ನು ಬಿಡಬೇಕೆಂಬ ಬೇಡಿಕೆಯನ್ನು ಕರ್ನಾಟಕ ನಿಯೋಗ ಮುಂದಿಟ್ಟಿದೆ. ಆದರೆ ಅಷ್ಟೊಂದು ಪ್ರಮಾಣದಲ್ಲಿ ನೀರು ಬಿಟ್ಟರೆ ನಮ್ಮಲ್ಲೇ ತೊಂದರೆಯಾಗುವ ಸಾಧ್ಯತೆ ಇದ್ದು ಈ ಬಗ್ಗೆ ಅಂತಿಮ ನಿರ್ಧಾರವನ್ನು ವಾರಾಂತ್ಯಕ್ಕೆ ಕೈಗೊಳ್ಳುವುದಾಗಿ ಮಹಾರಾಷ್ಟ್ರ ತಿಳಿಸಿದೆ.

ಪ್ರಾಥಮಿಕ ಒಪ್ಪಂದದ ಪ್ರಕಾರ ಮಹಾರಾಷ್ಟ್ರದ ದೂದಗಂಗಾ ಹಾಗೂ ವರ್ಣಾ ಜಲಾಶಯಗಳಿಂದ ರಾಜ್ಯಕ್ಕೆ ತಲಾ ಒಂದು ಟಿಎಂಸಿ ನೀರು ಬಿಡಲಾಗುತ್ತಿದೆ. ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಅವರು ಕರ್ನಾಟಕದ ಪರವಾಗಿ ಪಾಲ್ಗೊಂಡಿದ್ದರು. 

 ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮತ್ತು ಸಚಿವರಾದ ಸಚಿವ ಸುನೀಲ ತತ್ಕಾರೆ, ಡಾ. ಪತಂಗರಾವ್ ಕದಮ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.