ADVERTISEMENT

ಮಹಿಳಾ ಕಾನ್‌ಸ್ಟೆಬಲ್‌ ಸಜೀವ ದಹನ

ಪೊಲೀಸ್‌ ಅಧಿಕಾರಿಯಿಂದಲೇ ಕೃತ್ಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 20:00 IST
Last Updated 15 ಜೂನ್ 2019, 20:00 IST
ಸೌಮ್ಯ
ಸೌಮ್ಯ   

ತಿರುವನಂತಪುರ: ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರನ್ನು ವ್ಯಕ್ತಿಯೊಬ್ಬ ಜೀವಂತವಾಗಿ ದಹನ ಮಾಡಿರುವ ಅಮಾನವೀಯ ಕೃತ್ಯ ಅಲಪ್ಪುಳಾ ಜಿಲ್ಲೆಯ ಮವೆಲಿಕ್ಕರ್‌ನಲ್ಲಿ ಶನಿವಾರ ನಡೆದಿದೆ.

ಮವೆಲಿಕ್ಕರ್‌ನ ವಲ್ಲಿಕ್ಕುಣ್ಣಂ ಠಾಣೆಯ ಕಾನ್‌ಸ್ಟೆಬಲ್‌ ಸೌಮ್ಯಾ ಪುಷ್ಪಾಕರಣ್‌ (32) ಸಾವಿಗೀಡಾದವರು. ಸೌಮ್ಯಾ ಅವರ ಪತಿ ಸಂಜೀವ್‌ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ.

ಕೃತ್ಯವೆಸಗಿದ ಪೊಲೀಸ್‌ ಅಧಿಕಾರಿ ಅಜಾಜ್‌ ಮತ್ತು ಸೌಮ್ಯಾ ಈ ಮೊದಲು ಒಂದೇ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು.

ADVERTISEMENT

ಮಧ್ಯಾಹ್ನ 3.30ರ ವೇಳೆಗೆ ಈ ಘಟನೆ ನಡೆದಿದೆ. ಠಾಣೆಯಿಂದ ಮನೆಗೆ ಬಂದಿದ್ದ ಸೌಮ್ಯಾ, ಮಧ್ಯಾಹ್ನ ಮತ್ತೆ ಹೊರಗೆ ಹೋಗುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಆರೋಪಿಯು ಕಾರಿನಲ್ಲಿ ಬಂದು ಡಿಕ್ಕಿ ಹೊಡೆದಿದ್ದಾನೆ. ಅಲ್ಲಿಂದ ಓಡಿ ಪಾರಾಗಲು ಯತ್ನಿಸಿದಾಗ ಮಚ್ಚಿನಿಂದ ಕೊಚ್ಚಿ ಹಾಕಿದ್ದಾನೆ. ಮಹಿಳೆ ಕುಸಿದು ಬಿದ್ದಾಗ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಬೆಂಕಿ ತಗುಲಿ ತೀವ್ರ ಗಾಯಗೊಂಡಿದ್ದಾನೆ. ಹೀಗಾಗಿ, ಪಾರಾಗಲು ಸಾಧ್ಯವಾಗಿಲ್ಲ. ಅಜಾಜ್‌ನನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳೀಯರು ಘಟನಾ ಸ್ಥಳಕ್ಕೆ ತೆರಳುವ ಹೊತ್ತಿಗೆ ಸೌಮ್ಯಾ ದಹನವಾಗಿದ್ದರು. ಘಟನೆಗೆ ಖಚಿತವಾದ ಕಾರಣಗಳು ತಿಳಿದು ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.