ADVERTISEMENT

ಮಹಿಳೆಯರಿಗೆ ಶಬರಿಮಲೆ ನಿಷೇಧ ಏಕೆ?

ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಅಲ್ಲವೇ ಎಂದು ಕೇಳಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 11 ಜನವರಿ 2016, 19:54 IST
Last Updated 11 ಜನವರಿ 2016, 19:54 IST

ನವದೆಹಲಿ: ‘ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಯಾಕೆ ಪ್ರವೇಶ ನಿರಾಕರಿಸಲಾಗುತ್ತಿದೆ? ಇದು ಮಹಿಳೆಯರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಅಲ್ಲವೇ’ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಪರಂಪರೆಯ ಹೆಸರಿನಲ್ಲಿ ಇಂತಹ ನಿಷೇಧವನ್ನು ಮುಂದುವರಿಸಿರುವುದಕ್ಕೆ ಅಯ್ಯಪ್ಪ ದೇವಾಲಯದ ಆಡಳಿತ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯನ್ನು ನ್ಯಾಯಮೂರ್ತಿ ದೀಪಕ್‌ ಮಿಶ್ರಾ  ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿದೆ.

ಶಬರಿಮಲೆ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವಂತೆ ನಿರ್ದೇಶಿಸಬೇಕು ಎಂದು ಯುವ ವಕೀಲರ ಸಂಘ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ.

ವಯಸ್ಸು, ಲಿಂಗ ಮತ್ತು ಜಾತಿಯ ಆಧಾರದಲ್ಲಿ ತಾರತಮ್ಯ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಹೇಳಿದ ಪೀಠ, ಇದಕ್ಕೆ ಕೇರಳ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

‘ಮಹಿಳೆಯರಿಗೆ ಪ್ರವೇಶ ನಿಷೇಧಿಸಲು ನಿಮಗೆ ಸಾಂವಿಧಾನಿಕ ಹಕ್ಕು ಇದ್ದರೆ ಮಾತ್ರ ಅವರು ದೇವಸ್ಥಾನ ಪ್ರವೇಶಿಸುವುದನ್ನು ತಡೆಯಬಹುದು’ ಎಂದು ಪೀಠ ಹೇಳಿದೆ. ವಿಚಾರಣೆಯನ್ನು 18ಕ್ಕೆ ಮುಂದೂಡಲಾಗಿದೆ.

ಕಳೆದ 1,500 ವರ್ಷಗಳಲ್ಲಿ ದೇವಾಲಯದೊಳಕ್ಕೆ ಮಹಿಳೆಯರು ಪ್ರವೇಶಿಸಿಲ್ಲ ಎಂಬುದು ಖಚಿತವೇ ಎಂದು  ಆಡಳಿತ ಮಂಡಳಿಯನ್ನು ಕೋರ್ಟ್‌ ಪ್ರಶ್ನಿಸಿದೆ. ಋತುಮತಿಯರಾದ ನಂತರ ಹೆಣ್ಣು ಮಕ್ಕಳಿಗೆ ದೇವಾಲಯ ಪ್ರವೇಶ ಇಲ್ಲ. ಮುಟ್ಟು ನಿಂತು ಹೋದ ಮಹಿಳೆಯರಿಗಷ್ಟೇ ಪ್ರವೇಶಕ್ಕೆ ಅವಕಾಶ. ಇದು ಅನುಸರಿಸಿಕೊಂಡು ಬಂದ ಪದ್ಧತಿ ಎಂದು ಆಡಳಿತ ಮಂಡಳಿ ಹೇಳಿದೆ. ಹಿಂದೆ ಕೇರಳ ಹೈಕೋರ್ಟ್‌ ನಿಷೇಧವನ್ನು ಎತ್ತಿ ಹಿಡಿದು ತೀರ್ಪು ನೀಡಿತ್ತು.

ಆದೇಶಕ್ಕೆ ತಡೆ
ಮದುರೆ: ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನಗಳಿಗೆ ಭೇಟಿ ನೀಡುವವರಿಗೆ ಹಾಗೂ ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್‌ ತಡೆ ನೀಡಿದೆ.

ಮಹಿಳಾ ಅಧ್ಯಕ್ಷರ ನೇಮಕ: ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶನಿಶಿಂಗ್ಣಾಪುರದ ಶನಿ ದೇವಾಲಯದ ಟ್ರಸ್ಟ್‌ಗೆ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅನಿತಾ ಶೆಟ್ಯೆ ಅಧ್ಯಕ್ಷರಾಗಿ ಆಯ್ಕೆಯಾದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT