
ನವದೆಹಲಿ (ಪಿಟಿಐ): ಮಾಜಿ ಮುಖ್ಯಮಂತ್ರಿಗಳು ಜೀವನಪರ್ಯಂತ ಸರ್ಕಾರಿ ವಸತಿ ಗೃಹಗಳಲ್ಲಿ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ವಸತಿ ಗೃಹದಲ್ಲಿ ಇದ್ದರೆ ಎರಡು ತಿಂಗಳ ಒಳಗೆ ಈ ನಿವಾಸಗಳನ್ನು ತೆರವು ಮಾಡಬೇಕು ಎಂದು ನ್ಯಾಯಮೂರ್ತಿ ಅನಿಲ್ ಆರ್. ದವೆ ನೇತೃತ್ವದ ಪೀಠ ಹೇಳಿದೆ.
ಉತ್ತರ ಪ್ರದೇಶದ ಎನ್‌ಜಿಒ ಲೋಕ ಪ್ರಹರಿ 2004ರಲ್ಲಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಎಲ್. ನಾಗೇಶ್ವರ ರಾವ್ ಅವರೂ ಇದ್ದ ಪೀಠ ವಿಚಾರಣೆ ನಡೆಸಿದೆ. ಸರ್ಕಾರಿ ಬಂಗಲೆಗಳನ್ನು ಮಾಜಿ ಮುಖ್ಯಮಂತ್ರಿಗಳು ಮತ್ತು ಇತರ ‘ಅರ್ಹತೆ ಇಲ್ಲದ’ ಸಂಘಟನೆಗಳಿಗೆ ನೀಡುವುದರ ವಿರುದ್ಧ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರಿ ಬಂಗಲೆ ಒದಗಿಸಬಾರದು ಎಂದು ಅಲಹಾಬಾದ್ ಹೈಕೋರ್ಟ್ ನಿರ್ದೇಶನ ಇದೆ. ಹಾಗಿದ್ದರೂ ಉತ್ತರ ಪ್ರದೇಶ ಸರ್ಕಾರ ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರಿ ಬಂಗಲೆ ಒದಗಿಸುವುದಕ್ಕಾಗಿಯೇ 1997ರಲ್ಲಿ ಮಾಜಿ ಮುಖ್ಯಮಂತ್ರಿಗಳಿಗೆ ನಿವಾಸ ನೀಡಿಕೆ ನಿಯಮಗಳನ್ನು ರೂಪಿಸಿದೆ ಎಂದು ಲೋಕ ಪ್ರಹರಿ ಆರೋಪಿಸಿದೆ.
1997ರಲ್ಲಿ ಸರ್ಕಾರ ರೂಪಿಸಿದ ನಿಯಮಗಳು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ. ಉತ್ತರ ಪ್ರದೇಶ ಸಾರ್ವಜನಿಕ ಸ್ಥಳಗಳ (ಅನಧಿಕೃತ ನಿವಾಸಿಗಳ ತೆರವುಗೊಳಿಸುವಿಕೆ) ಕಾಯ್ದೆ ಪ್ರಕಾರ ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ನಿವಾಸದಲ್ಲಿ ಇದ್ದರೆ ಅದು ಅನಧಿಕೃತವಾಗುತ್ತದೆ ಎಂದು ಎನ್‌ಜಿಒ ವಾದಿಸಿದೆ.
ಉತ್ತರ ಪ್ರದೇಶ ಸಚಿವರ ಸೌಲಭ್ಯಗಳ (ವೇತನ/ಭತ್ಯೆ ಮತ್ತು ಇತರ ಸೌಲಭ್ಯಗಳು) ಕಾಯ್ದೆ ಪ್ರಕಾರವೂ ಮುಖ್ಯಮಂತ್ರಿಗಳು ಹುದ್ದೆಯಿಂದ ಕೆಳಗಿಳಿದ ನಂತರ ಸರ್ಕಾರಿ ನಿವಾಸದಲ್ಲಿ ಇರುವಂತಿಲ್ಲ ಎಂದೂ ಲೋಕ ಪ್ರಹರಿ ಹೇಳಿದೆ.
***
ಜೀವನಪರ್ಯಂತ ಸರ್ಕಾರಿ ವಸತಿಗೃಹದಲ್ಲಿ ಉಳಿಯುವ ಹಕ್ಕು ಮಾಜಿ ಮುಖ್ಯಮಂತ್ರಿಗಳಿಗೆ ಇಲ್ಲ
-ಸುಪ್ರೀಂ ಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.