ADVERTISEMENT

ಮಾಜಿ ಸಿಎಂಗಳ ವಿರುದ್ಧ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 19:30 IST
Last Updated 27 ಏಪ್ರಿಲ್ 2012, 19:30 IST

ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ `ಅಕ್ರಮ ಗಣಿಗಾರಿಕೆ ಹಗರಣ~ದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎನ್.ಧರ್ಮಸಿಂಗ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಪಾತ್ರ ಕುರಿತೂ ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಬೇಕೆಂದು `ಕೇಂದ್ರ ಉನ್ನತಾಧಿಕಾರ ಸಮಿತಿ~ಗೆ  ಟಿ.ಜೆ. ಅಬ್ರಹಾಂ  ಎನ್ನುವವರು ಶುಕ್ರವಾರ ಮನವಿ ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಆದರೆ, ಎಸ್.ಎಂ. ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ ಅವರಿಗೆ ಹೋಲಿಸಿದರೆ ಇವರ ಮೇಲೆ ಬಂದಿರುವುದು ಅತೀ ಸಣ್ಣ ಆರೋಪ. ಅವರನ್ನೆಲ್ಲ ಬಿಟ್ಟು ಯಡಿಯೂರಪ್ಪನವರ ವಿರುದ್ಧ ಮಾತ್ರ ತನಿಖೆ ನಡೆದರೆ `ಇಲಿ ಬಿಟ್ಟು ಬರೀ ಬಾಲ ಹಿಡಿದಂತಾಗುತ್ತದೆ~ ಎಂದು ಅಬ್ರಹಾಂ ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲಿಸುತ್ತಿರುವ ಸಿಇಸಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

`ಗಣಿ ಲೂಟಿಕೋರರು ಹಾಗೂ ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿ ಯಡಿಯೂರಪ್ಪ ಅವರ ಕಾಲದಿಂದ ಆರಂಭವಾಗಿದ್ದಲ್ಲ. ಇದಕ್ಕೆ ಬಹು ವರ್ಷಗಳ ಇತಿಹಾಸವಿದೆ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ 2002ರ ಡಿ.16ರಂದು ಮೀಸಲು ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ವಿವಾದಾತ್ಮಕ ತೀರ್ಮಾನವನ್ನು ಸಚಿವ ಸಂಪುಟದ ಸಭೆಯಲ್ಲಿ ಕೈಗೊಳ್ಳಲಾಗಿದೆ. ಮರು ವರ್ಷ ಮಾ. 15ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಗಣಿ ಲಾಬಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ADVERTISEMENT

ಮಾಜಿ ಮುಖ್ಯಮಂತ್ರಿಗಳಾದ ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ, ಕೆಲವು ಐಎಎಸ್, ಐಪಿಎಸ್ ಹಾಗೂ ಮೈಸೂರು ಮಿನರಲ್ಸ್ ಲಿ. ಮೂವರು ಅಧಿಕಾರಿಗಳ ಮೇಲೆ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಗಣಿಗಾರಿಕೆ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ಮೇಲಿನ ಆರೋಪಗಳಿಗೆ ಹೋಲಿಸಿದರೆ ಉಳಿದ ಮೂವರು ಮಾಜಿ ಮುಖ್ಯಮಂತ್ರಿಗಳ ಮೇಲಿನ ಆರೋಪಗಳು ಒಂದು ನೂರು ಪಟ್ಟು ದೊಡ್ಡವು. ಈ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಕುರಿತು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಯಬೇಕು ಎಂದು ಅಬ್ರಹಾಂ  `ಪ್ರಜಾವಾಣಿ~ ಜತೆ ಮಾತನಾಡುತ್ತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.