ADVERTISEMENT

ಮಾಧ್ಯಮಗಳಿಗೆ ನಿರ್ಬಂಧ ಕ್ರಮ ಸರಿ : ದೆಹಲಿ ಕೋರ್ಟ್

ದೆಹಲಿ ಅತ್ಯಾಚಾರ ಪ್ರಕರಣದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2013, 10:50 IST
Last Updated 9 ಜನವರಿ 2013, 10:50 IST
ಮಾಧ್ಯಮಗಳಿಗೆ ನಿರ್ಬಂಧ ಕ್ರಮ ಸರಿ : ದೆಹಲಿ ಕೋರ್ಟ್
ಮಾಧ್ಯಮಗಳಿಗೆ ನಿರ್ಬಂಧ ಕ್ರಮ ಸರಿ : ದೆಹಲಿ ಕೋರ್ಟ್   

ನವದೆಹಲಿ (ಪಿಟಿಐ) : ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕಲಾಪದ ವರದಿ ಮಾಡದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ದೆಹಲಿ ಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ಅತ್ಯಾಚಾರ ಪ್ರಕರಣದ ಕೋರ್ಟ್ ಕಲಾಪವನ್ನು ವರದಿ ಮಾಡದಂತೆ ಜನವರಿ 7 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶಿಸಿರುವುದರಲ್ಲಿ ಅಕ್ರಮ ಅಥವಾ ಅಸಮಂಜಸ ಎನ್ನುವಂತಹದ್ದು ಏನೂ ಇಲ್ಲ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್. ಕೆ. ಗೌಬಾ ಅವರು ತಿಳಿಸಿದರು.

ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅತ್ಯಾಚಾರ ಮತ್ತು ಅದಕ್ಕೆ ಸಂಬಂಧಿಸಿದಂತಹ ಪ್ರಕರಣಗಳ ಗೌಪ್ಯ ವಿಚಾರಣೆ ನಡೆಸುವಂತೆ ಆದೇಶಿಸುವ (ಸೆಕ್ಷನ್ 327(2) ರ ಅನ್ವಯ) ಹಕ್ಕನ್ನು ಹೊಂದಿದ್ದಾರೆ ಎಂದು ಗೌಬಾ ಸ್ಪಷ್ಟಪಡಿಸಿದರು.

ಹಿನ್ನೆಲೆ :  ಜನವರಿ 7 ರಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿರುವ ಈ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಗಳ ಸುರಕ್ಷತೆಯ ಕುರಿತು ಅನುಮಾನ ಇರುವುದರಿಂದ ಸಿಆರ್‌ಪಿಸಿಯ ಕಲಂ 327 (2) (3)ರ ಅನ್ವಯ ಗೋಪ್ಯ ವಿಚಾರಣೆ ನಡೆಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ್ ಮೋಹನ್ ದೆಹಲಿ ಪೊಲೀಸರ ಪರವಾಗಿ ಅರ್ಜಿ ಸಲ್ಲಿಸಿದ್ದರು. 

ADVERTISEMENT

ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧವೇ ಇಲ್ಲದವರೂ ಕೋರ್ಟ್ ಸಭಾಂಗಣದಲ್ಲಿ ನೆರೆಯುತ್ತಿದ್ದಾರೆ. ಕೋರ್ಟ್ ಸಿಬ್ಬಂದಿಯ ಕಾರ್ಯನಿರ್ವಹಣೆಗೂ ಅಡಚಣೆಯಾಗುವಂತೆ ಜನ ತುಂಬುತ್ತಿದ್ದಾರೆ. ಹಿಂದೆಂದೂ ಕೇಳರಿಯದಂತೆ ಜನ ಕೋರ್ಟ್‌ಗೆ ನುಗ್ಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ಇಲ್ಲದೇ ಕೋರ್ಟ್ ಕಲಾಪಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ಪ್ರಕಟಿಸಬಾರದು ಎಂದೂ ಮಾಜಿಸ್ಟ್ರೇಟ್ ಆದೇಶಿಸಿದರು.

ಆದರೆ, ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿರುವ ಮ್ಯಾಜಿಸ್ಟ್ರೇಟ್   ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಕೆಲ ವಕೀಲರು ತಕ್ಷಣವೇ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಈ ಕುರಿತಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ದೆಹಲಿ ಪೊಲೀಸರಿಗೆ ನ್ಯಾಯಾಧೀಶ ಆರ್. ಕೆ. ಗೌಬಾ  ನೋಟಿಸ್ ಜಾರಿಗೊಳಿ, ಜ. 9 ರಂದು ವಿಚಾರಣೆ ನಡೆಸುವುದಾಗಿ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.