ADVERTISEMENT

ಮಾಧ್ಯಮ ಸ್ವಯಂ ನಿಯಂತ್ರಣ ಬೇಕು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2011, 19:30 IST
Last Updated 4 ನವೆಂಬರ್ 2011, 19:30 IST
ಮಾಧ್ಯಮ ಸ್ವಯಂ ನಿಯಂತ್ರಣ ಬೇಕು
ಮಾಧ್ಯಮ ಸ್ವಯಂ ನಿಯಂತ್ರಣ ಬೇಕು   

ನವದೆಹಲಿ (ಪಿಟಿಐ): ಮಾಧ್ಯಮ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಸರ್ಕಾರ ಉದ್ದೇಶಿಸಿಲ್ಲ. ಆದರೆ `ಮಾಧ್ಯಮ ವಿಚಾರಣೆ~ ಹಾಗೂ `ವೈಯಕ್ತಿಕ ನಿಂದನೆ~ಯಿಂದ ದೂರ ಇರಲು ವಿದ್ಯುನ್ಮಾನ ಮಾಧ್ಯಮಗಳು ಸ್ವಯಂ ನಿಯಂತ್ರಣಾ ವ್ಯವಸ್ಥೆ ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವೆ ಅಂಬಿಕಾ ಸೋನಿ ಶುಕ್ರವಾರ ಹೇಳಿದ್ದಾರೆ.

ಸನ್ನಿವೇಶಗಳನ್ನು ನಿರ್ವಹಿಸಲು ಸ್ವಯಂ ನಿಯಂತ್ರಣ ಉನ್ನತ ವಿಧಾನವಾಗಿದೆ. ಅಲ್ಲದೆ ಇದು ಒಂದು ಆದರ್ಶ ಪರಿಹಾರ ಕೂಡ ಹೌದು ಎಂದು ಸೋನಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಾಧ್ಯಮ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಸರ್ಕಾರ ಉದ್ದೇಶಿಸಿದೆಯೇ ಎಂಬ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
ಇತ್ತೀಚೆಗೆ 10 ಸುದ್ದಿ ವಾಹಿನಿಗಳ ಪರವಾನಗಿ ನವೀಕರಣದ ವೇಳೆ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸ್ದ್ದಿದು ಮಾಧ್ಯಮ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

`ಅಣ್ಣಾ ಹಜಾರೆ ಅವರ ಆಂದೋಲನದಲ್ಲಿ ಮಾಧ್ಯಮ ವರದಿಗಳು ಉತ್ಪ್ರೇಕ್ಷೆಯಿಂದ ಕೂಡಿದ್ದವು ಎನ್ನುವ ಸಾಮಾನ್ಯ ಭಾವನೆ ಇದೆ. ಆ ವಾತಾವರಣವೇ ಪ್ರಚೋದನಕಾರಿಯಾಗಿತ್ತೇ ಅಥವಾ ಜನರಿಗೆ ಇದೊಂದು ಹೊಸ ಬೆಳವಣಿಗೆಯಾಗಿತ್ತೇ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಅಲ್ಲಿನ ವಿದ್ಯಮಾನಕ್ಕಿಂತ ಹೆಚ್ಚಿನದನ್ನು ಪ್ರಚಾರ ಮಾಡಲಾಗಿತ್ತು ಎಂಬುದು ನನ್ನ ಭಾವನೆ~ ಎಂದು ಸೋನಿ, ಅಣ್ಣಾ ಸತ್ಯಾಗ್ರಹದಲ್ಲಿ ಮಾಧ್ಯಮ ನಡೆದುಕೊಂಡ ರೀತಿಯನ್ನು ಉಲ್ಲೇಖಿಸಿದರು.

ವಿದ್ಯುನ್ಮಾನ ಮಾಧ್ಯಮವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸರ್ಕಾರ `ಮಾಧ್ಯಮ ಮಂಡಲಿ~ ರಚಿಸಬೇಕು ಎಂಬ ಪತ್ರಿಕಾ ಮಂಡಳಿ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಹೇಳಿಕೆಗೆ ಸೋನಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಚಿವ ಪ್ರಣವ್ ನೇತೃತ್ವದ ಸಚಿವರ ಗುಂಪಿನ ಮುಂದೆ ಇಂಥ ಸಲಹೆಗಳು ಇವೆ ಎಂದಷ್ಟೇ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.