ADVERTISEMENT

ಮಾಯಾವತಿ : ಬೆಂಬಲ ವಾಪಸ್ ನಿರ್ಧಾರ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST
ಮಾಯಾವತಿ : ಬೆಂಬಲ ವಾಪಸ್ ನಿರ್ಧಾರ ಮುಂದಕ್ಕೆ
ಮಾಯಾವತಿ : ಬೆಂಬಲ ವಾಪಸ್ ನಿರ್ಧಾರ ಮುಂದಕ್ಕೆ   

ಲಖನೌ (ಪಿಟಿಐ): ಯುಪಿಎ ಸರ್ಕಾರಕ್ಕೆ ನೀಡಿರುವ ಬಾಹ್ಯ ಬೆಂಬಲವನ್ನು ಮುಂದುವರಿಸುವ ವಿಚಾರವನ್ನು ಮುಂದಕ್ಕೆ ಹಾಕಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು, ಅವಧಿಗೆ ಮೊದಲೇ ಲೋಕಸಭೆಗೆ ಚುನಾವಣೆ ನಡೆದರೆ ಸಿದ್ಧವಾಗಿರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

 ಬಿಎಸ್‌ಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಸಂಸದೀಯ ಮಂಡಲಿಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಯುಪಿಎಗೆ ಬೆಂಬಲ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕಾರ್ಯಕಾರಿಣಿ ಮತ್ತು ಸಂಸದೀಯ ಮಂಡಲಿ ಮಾಯಾವತಿ ಅವರಿಗೆ ಬಿಟ್ಟಿದೆ.  ಸಭೆಯ ನಂತರ ಪತ್ರಕರ್ತರ ಜತೆ ಮಾತನಾಡಿದ ಮಾಯಾವತಿ ಶೀಘ್ರದಲ್ಲಿಯೇ ಪಕ್ಷದ ನಿರ್ಧಾರ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.

ಮಾಯಾವತಿ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸುವುದು ಸಿಬಿಐ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ತಿಳಿಸಿರುವುದರಿಂದ ಕೇಂದ್ರದ ಮೇಲೆ ಒತ್ತಡ ಹೇರುವ ತಂತ್ರವಾಗಿ ಬೆಂಬಲ ವಾಪಸು ತೆಗೆದುಕೊಳ್ಳುವ ಮಾತನಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿಬಿಐ ಮುಂದಿನ ಹೆಜ್ಜೆಯನ್ನು ನೋಡಿಕೊಂಡು ಬೆಂಬಲ ಮುಂದುವರಿಸುವುದರ ಬಗ್ಗೆ ಮಾಯಾವತಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಲೋಕಸಭೆಗೆ ಅವಧಿಗೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆಗಳು ಇರುವುದರಿಂದ ಪಕ್ಷವು ಯುದ್ಧೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಮತ್ತು ಪಕ್ಷ ಮುಂದಿನ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಇದಲ್ಲದೆ ಜನ ವಿರೋಧಿಸಿ ನೀತಿಯಿಂದ ಎಲ್ಲರಿಗೂ ತೊಂದರೆಯಾಗಿದೆ ಎಂದು ಟೀಕಿಸಿದರು.

ಎಚ್ಚರಿಕೆಯ ಪ್ರತಿಕ್ರಿಯೆ: ಮಾಯಾವತಿ ಅವರ ಹೇಳಿಕೆಗೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, `ಬಿಎಸ್‌ಪಿ ನಾಯಕಿಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ, ಆದರೆ ಸರ್ಕಾರದ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಿಕೊಳ್ಳಬಹುದಾಗಿದೆ~ ಎಂದು ಹೇಳಿದೆ.

ಸರ್ಕಾರದ ನೀತಿಯ ಬಗ್ಗೆ ಏನಾದರೂ ತಕರಾರು ಇದ್ದಲ್ಲಿ ಬೆಂಬಲಿಗ ಪಕ್ಷಗಳಿಗೆ ಮನವರಿಕೆ ಮಾಡಿಕೊಡಲು ಸಿದ್ಧ ಎಂದು ಕಾಂಗ್ರೆಸ್ ಮುಖಂಡ ಮತ್ತು ಕೇಂದ್ರ ಸಚಿವ ರಾಜೀವ್ ಶುಕ್ಲಾ  ತಿಳಿಸಿದ್ದಾರೆ.

ಮಾಯಾವತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಅವರು, `ಬೆಂಬಲ ವಾಪಸ್ ಪಡೆಯುವ ವಿಚಾರ ಬಿಎಸ್‌ಪಿಯ ಆಂತರಿಕ ವಿಷಯ, ನಮ್ಮ ಸರ್ಕಾರ ಸ್ಥಿರವಾಗಿದೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.