ADVERTISEMENT

ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಪಾಲಿಸಿಲ್ಲ: ಹಸಿರು ಪೀಠ

ಪಿಟಿಐ
Published 10 ಡಿಸೆಂಬರ್ 2017, 19:55 IST
Last Updated 10 ಡಿಸೆಂಬರ್ 2017, 19:55 IST
ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಪಾಲಿಸಿಲ್ಲ: ಹಸಿರು ಪೀಠ
ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಪಾಲಿಸಿಲ್ಲ: ಹಸಿರು ಪೀಠ   

ನವದೆಹಲಿ: ಯಮುನಾ ನದಿ ತೀರದಲ್ಲಿ ಕಳೆದ ವರ್ಷ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಶ್ರೀ ಶ್ರೀ ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗ್‌ಗೆ (ಎಒಎಲ್‌) ಅನುಮತಿ ಕೊಟ್ಟ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯನ್ನು (ಡಿಪಿಸಿಸಿ) ರಾಷ್ಟ್ರೀಯ ಹಸಿರು ಪೀಠ ತರಾಟೆಗೆ ತೆಗೆದುಕೊಂಡಿದೆ. ಅನುಮತಿ ಕೊಟ್ಟ ಕ್ರಮ ಕಾನೂನುಬದ್ಧವಲ್ಲ ಎಂದು ಪೀಠ ಹೇಳಿದೆ.

ಅನುಮತಿ ಕೊಡುವಾಗ ಎಚ್ಚರಿಕೆ ವಹಿಸಲಾಗಿಲ್ಲ. ಈಗ ಅಸ್ತಿತ್ವದಲ್ಲಿರುವ ಪರಿಸರ ಕಾನೂನುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಹಸಿರು ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌ ಹೇಳಿದ್ದಾರೆ.

ನೆಲ, ಜಲ, ಪರಿಸರ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳು ಮಲಿನಗೊಳ್ಳದಂತೆ ನೋಡಿಕೊಳ್ಳುವುದು ಡಿಪಿಸಿಸಿಯ ಕರ್ತವ್ಯ. ಪರಿಸರ ನಾಶ ಅಥವಾ ಹಾನಿ ಆಗಲೇ ಬಾರದು. ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದರೆ ಭಾರಿ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದನ್ನು ನಿರ್ವಹಿಸಲು ಅಗತ್ಯ ಷರತ್ತುಗಳನ್ನು ಡಿಪಿಸಿಸಿ ನಿಗದಿ ಮಾಡಬೇಕಿತ್ತು ಎಂದು ಸ್ವತಂತ್ರ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಕಾರ್ಯಕ್ರಮದಿಂದಾಗಿ ಯಮುನಾ ನದಿ ತೀರದಲ್ಲಿ ಆದ ಪರಿಸರ ಹಾನಿಗೆ ಎಒಎಲ್‌ ಸಂಸ್ಥೆ ನೇರ ಕಾರಣ ಎಂದು ಹಸಿರುಪೀಠ ತೀರ್ಪು ನೀಡಿತ್ತು. ಹಸಿರುಪೀಠದ ನಿರ್ದೇಶನದಂತೆ ಎಒಎಲ್‌ ಠೇವಣಿ ಇರಿಸಿದ ₹5 ಕೋಟಿ ಅಲ್ಲದೆ ಹೆಚ್ಚುವರಿ ದಂಡ ವಿಧಿಸಲು ನಿರಾಕರಿಸಿತ್ತು. ಠೇವಣಿ ಇರಿಸಿದ ಹಣವನ್ನು ಬಳಸಿಕೊಂಡು ಯಮುನಾ ನದಿ ತೀರದಲ್ಲಿ ಆಗಿರುವ ಹಾನಿಯನ್ನು ಸರಿಪಡಿಸುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿತ್ತು. ಹಾನಿ ಸರಿಪಡಿಸಲು ಇದಕ್ಕಿಂತ ಹೆಚ್ಚು ಖರ್ಚಾದರೆ ಅದನ್ನು ಎಒಎಲ್‌ನಿಂದ ಪಡೆದುಕೊಳ್ಳುವಂತೆ ಮತ್ತು ₹5 ಕೋಟಿಗಿಂತ ಕಡಿಮೆ ಖರ್ಚಾದರೆ ಉಳಿದ ಹಣವನ್ನು ಎಒಎಲ್‌ಗೆ ನೀಡುವಂತೆ ಪೀಠ ಸೂಚಿಸಿತ್ತು.

ಹಸಿರುಪೀಠದ ತೀರ್ಪು ಸಮರ್ಥನೀಯವಲ್ಲ ಮತ್ತು ಲೋಪದಿಂದ ಕೂಡಿದೆ. ಅದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಎಒಎಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.