ADVERTISEMENT

ಮಾವೊ ನಾಯಕನ ಪತ್ನಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ರಾಯಗಡ (ಐಎಎನ್‌ಎಸ್, ಪಿಟಿಐ): ಬಿಜೆಡಿ ಶಾಸಕ ಜಿನಾ ಹಿಕಾಕ ಹಾಗೂ ಇಟಲಿ ಪ್ರವಾಸಿ ಮಾರ್ಗದರ್ಶಿ ಬಾಸ್ಕೊ ಪಾಲೊ ಅವರ ಬಿಡುಗಡೆಗೆ ಮಾವೊವಾದಿಗಳು ವಿಧಿಸಿದ್ದ ಗಡುವು ಮಂಗಳವಾರ ಸಂಜೆ ಕೊನೆಗೊಂಡಿದ್ದು ಪರಿಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಈ ಇಬ್ಬರನ್ನು ಮಾವೊವಾದಿಗಳು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮಾವೊವಾದಿಗಳ ನಾಯಕ ಸವ್ಯಸಾಚಿ ಪಾಂಡಾ ಅವರ ಪತ್ನಿ ಶುಭಶ್ರೀ ದಾಸ್ ಅವರನ್ನು ಇಲ್ಲಿನ ತ್ವರಿತ ನ್ಯಾಯಾಲಯ ಮಂಗಳವಾರ ಬಿಡುಗಡೆ ಮಾಡಿದೆ. ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಶುಭಶ್ರೀ ಮತ್ತಿತರರನ್ನು ಬಿಡುಗಡೆಮಾಡಬೇಕು ಎಂಬ ಷರತ್ತನ್ನು ಮಾವೊವಾದಿಗಳು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಡಿಶಾದ ರಾಯಗಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 2010ರಲ್ಲಿ ಮಾವೊವಾದಿಗಳು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಶುಭಶ್ರೀ ಅವರನ್ನು ಬಂಧಿಸಲಾಗಿತ್ತು. ಒತ್ತೆಯಾಳುಗಳ ಬಿಡುಗಡೆಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದ್ದರೂ ಮಾವೊವಾದಿಗಳಿಂದ ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.

50ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯ ಹತ್ಯೆ ಪ್ರಕರಣದ ಆರೋಪಿಯಾಗಿರುವ ಮಾವೊವಾದಿ  ನಾಯಕ ಚೆಂದಾ ಭೂಷಣಂ ಅವರನ್ನು ಬಿಡುಗಡೆ ಮಾಡುವುದಲ್ಲದೆ, ಆದಿವಾಸಿಗಳ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಿಷೇಧಿಸಬೇಕೆಂದುದು ಸೇರಿದಂತೆ ಒಟ್ಟು 13 ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ.

ಶಂಕರಾಚಾರ್ಯ ಕಳವಳ: ಈ ನಡುವೆ, ಮಾವೊವಾದಿಗಳ ಅಟ್ಟಹಾಸದ ಕುರಿತು ಹೇಳಿಕೆ ನೀಡಿರುವ ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ, ಈ ಸಂಬಂಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

`ಮಾವೊವಾದಿಗಳ ಚಟುವಟಿಕೆ ತೀವ್ರಗೊಳ್ಳಲು ಇವತ್ತಿನ ನಮ್ಮ ಉದ್ಯೋಗ ಆಧಾರಿತ ಶಿಕ್ಷಣ ಪದ್ಧತಿಯೇ ಕಾರಣ, ಸಾಂಸ್ಕೃತಿಕ ಪರಂಪರೆ ಎತ್ತಿ ಹಿಡಿಯುವ ಶಿಕ್ಷಣ ನಮ್ಮದಾಗಬೇಕು~ ಎಂದಿದ್ದಾರೆ.

ಭುವನೇಶ್ವರ ವರದಿ: ಒತ್ತೆಯಾಳುಗಳ ಬಿಡುಗಡೆ ಸಂಬಂಧ ಮಾವೊವಾದಿಗಳು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಕುರಿತು ರಾಜ್ಯ ಸರ್ಕಾರ ಉತ್ಸುಕವಾಗಿಲ್ಲ. ಅವರ ಬೇಡಿಕೆ ಈಡೇರಿಸುವುದಾದಲ್ಲಿ ನಕ್ಸಲ್ (ಮಾವೊವಾದಿ) ವಿರೋಧಿ ಕಾರ್ಯಾಚರಣೆಯಿಂದ ಹಿಂದೆ ಸರಿಯುವುದಾಗಿ ಪೊಲೀಸ್ ಸಂಘಟನೆ ಬೆದರಿಕೆ ಹಾಕಿರುವುದರಿಂದ ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳದಂತಾಗಿದೆ.

`ಅಪಹೃತ ಶಾಸಕರನ್ನು ಬಿಡುಗಡೆ ಮಾಡಿದರೆ ನಿಮ್ಮ 23 ಕೈದಿಗಳ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು~ ಎಂಬ ಸಂದೇಶವನ್ನು ರಾಜ್ಯ ಗೃಹ ಕಾರ್ಯದರ್ಶಿ ಯು.ಎನ್. ಬೆಹ್ರಾ ಮಾವೊಗಳಿಗೆ ರವಾನಿಸಿರುವುದು ಪೊಲೀಸರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.