`ಮಾಹಿತಿ ಹಕ್ಕು ಅರ್ಜಿ: ನೆಪ ಹೇಳಿ ನುಣುಚಿಕೊಳ್ಳಬೇಡಿ~
ನವದೆಹಲಿ: ತಾಂತ್ರಿಕ ತಪ್ಪುಗಳನ್ನೇ ನೆಪವಾಗಿಟ್ಟುಕೊಂಡು ಮಾಹಿತಿ ಹಕ್ಕು ಅರ್ಜಿಗಳಿಗೆ ಉತ್ತರಿಸಲು ನುಣುಚಿಕೊಳ್ಳುವ ಸರ್ಕಾರಿ ಅಧಿಕಾರಿಗಳಿಗೆ ಕೇಂದ್ರ ಮಾಹಿತಿ ಆಯೋಯವು (ಸಿಐಸಿ) ಎಚ್ಚರಿಕೆ ನೀಡಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಬಯಸುವ ಅರ್ಜಿದಾರರು ಅರ್ಜಿ ಶುಲ್ಕವನ್ನು ತಪ್ಪು ಗ್ರಹಿಕೆಯಿಂದ ನಿರ್ದಿಷ್ಟ ಅಧಿಕಾರಿಗಳಿಗೆ ಸಲ್ಲಿಸದಿದ್ದರೆ ಅಥವಾ ಬೇರೆ ಯಾವುದೇ ವಿಧಾನದಲ್ಲಿ ತಪ್ಪಾಗಿ ಭರ್ತಿ ಮಾಡಿದ್ದರೂ ಅರ್ಜಿದಾರರಿಗೆ ಮಾಹಿತಿ ನೀಡಬೇಕು, ನಿರಾಕರಿಸುವಂತಿಲ್ಲ ಎಂದು ಸೂಚಿಸಿದೆ.
ಇಂತಹ ನೆಪಗಳನ್ನೇ ಮುಂದಿಟ್ಟುಕೊಂಡು ಅರ್ಜಿದಾರರಿಗೆ ಮಾಹಿತಿ ನೀಡದಿರುವುದು ಅಥವಾ ವಿಳಂಬ ಮಾಡುವುದು ಸರಿಯಲ್ಲ ಮತ್ತು ಇಂತಹ ವರ್ತನೆಯನ್ನು ಮನ್ನಿಸಲು ಆಗದು ಎಂದು ಸಿಇಸಿ ಆಯುಕ್ತ ಸತ್ಯಾನಂದ ಮಿಶ್ರಾ ಹೇಳಿದ್ದಾರೆ.
ಈಡೇರದ ಟಚ್‌ಸ್ಕ್ರೀನ್ ಮೊಬೈಲ್ ಆಸೆ: ಬಾಲಕ ಆತ್ಮಹತ್ಯೆ
ಭೋಪಾಲ್ (ಐಎಎನ್‌ಎಸ್): ಪಾಲಕರು ಟಚ್‌ಸ್ಕ್ರೀನ್ ಮೊಬೈಲ್ ಫೋನ್ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ 11 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡಸೌರ್ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿ ಬಿಹಾರಿಲಾಲ್ ಮೆಹರಾ ಅವರ ಪುತ್ರ ಏಳನೇ ವರ್ಗದಲ್ಲಿ ಓದುತ್ತಿದ್ದ ಸುಜಲ್ ಮೆಹರಾ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ವಿವೇಕಾನಂದ ಇಂಗ್ಲಿಷ್ ಶಾಲೆಯಲ್ಲಿ ಓದುತ್ತಿದ್ದ.
ಶುಕ್ರವಾರ ಶಾಲೆಗೆ ಹೋದಾಗ ಸ್ನೇಹಿತನ ಕೈಯಲ್ಲಿ ಟಚ್‌ಸ್ಕ್ರೀನ್ ಮೊಬೈಲ್ ಇದ್ದುದನ್ನು ನೋಡಿದ ಸುಜಲ್, ಮನೆಗೆ ಬಂದವನೇ ತನಗೂ ಟಚ್‌ಸ್ಕ್ರೀನ್ ಮೊಬೈಲ್ ಬೇಕು ಎಂದು ಹಠ ಹಿಡಿದ. ಆದರೆ ತಂದೆ- ತಾಯಿಗಳು ಇದಕ್ಕೆ ಒಪ್ಪಲಿಲ್ಲ. ಇದರಿಂದ ಹತಾಶಗೊಂಡ ಬಾಲಕ ಕೊಣೆಯ ಒಳಗೆ ಹೋಗಿ ತಾಯಿಯ ಸೀರೆಯನ್ನು ಫ್ಯಾನಿಗೆ ಕಟ್ಟಿ ನೇಣು ಹಾಕಿಕೊಂಡಿದ್ದಾನೆ.
ಆದಾಯ ತೆರಿಗೆ ಇಲಾಖೆಗೆ ಸತ್ಯ ಸಾಯಿ ಟ್ರಸ್ಟ್ ಹಣ
ಅನಂತಪುರ (ಪಿಟಿಐ): ವಾಹನವೊಂದರಿಂದ ಪೊಲೀಸರು ವಶಪಡಿಸಿಕೊಂಡಿದ್ದ ಸತ್ಯ ಸಾಯಿ ಟ್ರಸ್ಟಿಗೆ ಸೇರಿದ 35.5 ಲಕ್ಷ ರೂಪಾಯಿಗಳನ್ನು ಅದಾಯ ತೆರಿಗೆ ಇಲಾಖೆಗೆ ನೀಡಬೇಕು ಎಂದು ಹಿಂದಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ್ದಾರೆ.
ಬೆಂಗಳೂರು ಮೂಲದ ಸಲಹಾ ಸಂಸ್ಥೆ, ಕೆಲವು ಭಕ್ತರು ಹಾಗೂ ಆದಾಯ ತೆರಿಗೆ ಇಲಾಖೆಯು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಹಣವನ್ನು ತಮ್ಮ ವಶಕ್ಕೆ ಕೊಡಬೇಕು ಎಂದು ಕೋರಿದ್ದರು. ಭಕ್ತರು ಮತ್ತು ಸಲಹಾ ಸಂಸ್ಥೆಯ ಕೋರಿಕೆಯನ್ನು ತಿರಸ್ಕರಿಸಿರುವ ನ್ಯಾಯಾಧೀಶರು, ಹಣವನ್ನು ಆದಾಯ ಕರ ಇಲಾಖೆಗೆ ನೀಡಬೇಕು ಎಂದು ಪೊಲೀಸರಿಗೆ ಆದೇಶಿಸಿದ್ದಾರೆ.
2ಜಿ ಲೈಸೆನ್ಸ್ ರದ್ದು: ವಿಚಾರಣೆಗೆ ಹೊಸ ನ್ಯಾಯಪೀಠ
ನವದೆಹಲಿ (ಐಎಎನ್‌ಎಸ್): ಮೊದಲು ಬಂದವರಿಗೆ ಆದ್ಯತೆಯ ಆಧಾರದಲ್ಲಿ ಹಂಚಿಕೆಯಾಗಿದ್ದ ತರಂಗಾಂತರ ಲೈಸೆನ್ಸ್‌ನ್ನು ರದ್ದುಪಡಿಸಿರುವ ತೀರ್ಪನ್ನು ಪರಾಮರ್ಶಿಸಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೊಸ ನ್ಯಾಯಪೀಠವು ನಡೆಸಲಿದೆ.
ನ್ಯಾಯಮೂರ್ತಿ ಜಿ. ಎಸ್. ಸಿಂಘ್ವಿ ಮತ್ತು ಈಗ ನಿವೃತ್ತಿ ಹೊಂದಿರುವ ಎ. ಕೆ. ಗಂಗೂಲಿ ಅವರನ್ನು ಒಳಗೊಂಡಿದ್ದ ನ್ಯಾಯಪೀಠವು ಲೈಸೆನ್ಸ್ ರದ್ದುಪಡಿಸಿ ತೀರ್ಪು ನೀಡಿತ್ತು. ಈಗ ಹೊಸ ಅರ್ಜಿಯ ವಿಚಾರಣೆಯನ್ನು ಸಿಂಘ್ವಿ ಮತ್ತು ಇನ್ನೊಬ್ಬ ನ್ಯಾಯಮೂರ್ತಿ ಅವರನ್ನು ಒಳಗೊಂಡ ಹೊಸ ಪೀಠವು ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.