ADVERTISEMENT

ಮುಂದುವರಿದ ಅಣ್ಣಾ ಮೌನ ವ್ರತ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 5:55 IST
Last Updated 27 ಅಕ್ಟೋಬರ್ 2011, 5:55 IST

 ಮುಂಬೈ (ಪಿಟಿಐ): ತಮ್ಮ ಆರೋಗ್ಯ ಸುಧಾರಣೆಗಾಗಿ ತಮ್ಮ ~ಮೌನ ವ್ರತ~ವನ್ನು ಮತ್ತೆ ಮುಂದುವರಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಗುರುವಾರ ತಿಳಿಸಿದ್ದಾರೆ.

~ನನ್ನ ಆರೋಗ್ಯ ಸ್ಥಿತಿ ಇನ್ನೂ ಸುಧಾರಿಸಿಲ್ಲ. ನನ್ನ ಪಾದಗಳಲ್ಲಿ ಇನ್ನೂ ಬಾವು ಇದೆ, ಜೊತೆಗೆ ಮೊಣಕಾಲುಗಳಲ್ಲಿ ನೋವಿದೆ. ನನ್ನ ~ಮೌನ ವ್ರತ~ವು ನನ್ನ ದೇಹದೊಳಗಿನ ಮತ್ತು ಹೊರಗಿನ ನೋವುಗಳನ್ನು ನಿವಾರಿಸಬಲ್ಲುದು~ ಎಂದು ಅವರು ತಮ್ಮ ಬ್ಲಾಗ್ ನಲ್ಲಿ ಹೇಳಿಕೊಂಡಿದ್ದಾರೆ.

~ಜನರೊಂದಿಗೆ ಮಾತನಾಡುತ್ತಾ ಸಂವಾದ ನಡೆಸಿದಾಗ ದಣಿವಾಗುತ್ತದೆ, ಅದು ನನ್ನಲ್ಲಿ ಅಶಕ್ತತೆ ಮೂಡಿಸುವುದು. ಹೀಗಾಗಿ ನನ್ನ ದೈಹಿಕ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ~ಮೌನ ವ್ರತ~ ಮುಂದುವರಿಸಲು ನಿರ್ಧರಿಸಿದ್ದೇನೆ~ ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

ಏಪ್ಪತ್ನಾಲ್ಕು ವರ್ಷದ ಗಾಂಧಿವಾದಿ ಅಣ್ನಾ ಹಜಾರೆ ಅವರು, ತಮ್ಮ ಸ್ವಂತ ಊರು ಮಹಾರಾಷ್ಟ್ರದ ರಾಳೆಗಣಸಿದ್ಧಿ ಗ್ರಾಮದಲ್ಲಿ ಅಕ್ಟೋಬರ್ 16ರಿಂದ ~ಆತ್ಮ ಶಾಂತಿ~ಗಾಗಿ ಮೌನವ್ರತ ಕೈಗೊಂಡಿದ್ದಾರೆ.

ಅವರ ತಂಡದ ಸದಸ್ಯರು ಸಭೆ ಸೇರುವ ಎರಡು ದಿನಗಳ ಮೊದಲೇ ಅವರು ಮತ್ತೆ ಮೌನವ್ರತ ಮುಂದುವರಿಸುವ ಈ ನಿರ್ಧಾರ ಕೈಗೊಂಡಿದ್ದಾರೆ. ತಂಡದ ಸದಸ್ಯರ ಮೇಲೆ ವಿವಾದಗಳ ಕೊಚ್ಚೆ ಎರಚುವುದು ಆರಂಭವಾದಾಗ ಅಣ್ಣಾ ಹಜಾರೆ ಅವರು ಮೌನವ್ರತ ಕೈಗೊಂಡಿದ್ದರು. ತೀರ ಈಚೆಗೆ ಅಣ್ಣಾ ತಂಡದ ಸದಸ್ಯರಾದ ಕಿರಣ್ ಬೇಡಿ ಅವರು ಹೆಚ್ಚುವರಿ ಪ್ರಯಾಣ ದರ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ತಮ್ಮ ಬರಹದ ಹೇಳಿಕೆಯಲ್ಲಿ ಅಣ್ಣಾ ಹಜಾರೆ ಅವರು, ಕಿರಣ್ ಬೇಡಿ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದರು.

~ಆರೋಪ ಮತ್ತು ತೇಜೋವಧೆ ಮಾಡುವುದನ್ನೇ ಕೆಲವರು ಮಂತ್ರ ಪಠಣ ಎಂದುಕೊಂಡಿದ್ದಾರೆ. ಇದೇನು ಬೇಡಿ ವಿರುದ್ಧದ ಮೊದಲ ಆರೋಪವಲ್ಲ. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯನೂ ~ನಾಲ್ಕು ಜನ ಕಳ್ಳರ ಕೂಟ~ದಿಂದ ಆಪಾದನೆ ಹಾಗೂ ಚಾರಿತ್ರ್ಯ ಹರಣಕ್ಕೆ ಈಡಾಗಬೇಕಾಗಿದೆ. ಜನಲೋಕಪಾಲ್ ಮಸೂದೆಯ ಪರ ಇಲ್ಲದ ಜನರೇ ಈ ಇಂಥ ಆರೋಪಗಳನ್ನು ಮಾಡುತ್ತಿದ್ದಾರೆ~ ಎಂದು ಅಣ್ಣಾ ಹಜಾರೆ ಅವರು ಹೇಳಿದ್ದರು. 

ಅಣ್ಣಾ ಹಜಾರೆ ಅವರು, ಮಂಗಳವಾರವಷ್ಟೇ ರಾಳೆಗಣ ಸಿಧ್ಧಿ ಗ್ರಾಮದಲ್ಲಿ ತಮ್ಮ ಮೌನವ್ರತ ಮುರಿದು ಗ್ರಾಮಸ್ಥರೊಂದಿಗೆ ದೀಪಾವಳಿ ಆಚರಿಸಿದ್ದರು. ~ಸಂಸತ್ತು ~ಜನ ಲೋಕಪಾಲ್ ಮಸೂದೆ~ಯನ್ನು ಅಂಗೀಕರಿಸಿದ ದಿನವೇ ನಿಜವಾದ ದೀಪಾವಳಿ ಆಚರಿಸಿದಂತಾಗುವುದು~ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.