ADVERTISEMENT

ಮುಂಬೈ: ಕಾಲ್ತುಳಿತಕ್ಕೆ 23 ಬಲಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2017, 20:05 IST
Last Updated 30 ಸೆಪ್ಟೆಂಬರ್ 2017, 20:05 IST
ಮುಂಬೈ: ಕಾಲ್ತುಳಿತಕ್ಕೆ 23 ಬಲಿ
ಮುಂಬೈ: ಕಾಲ್ತುಳಿತಕ್ಕೆ 23 ಬಲಿ   

ಮುಂಬೈ: ಇಲ್ಲಿನ ಎಲ್ಫಿನ್‌ಸ್ಟನ್‌ ರೋಡ್‌ ಮತ್ತು ಪರೇಲ್ ರೈಲು ನಿಲ್ದಾಣಗಳ ಮಧ್ಯೆ ಸಂಪರ್ಕ ಕಲ್ಪಿಸುವ ಪಾದಚಾರಿ ಸೇತುವೆಯ ಮೇಲೆ ಶುಕ್ರವಾರ ಬೆಳಿಗ್ಗೆ ಕಾಲ್ತುಳಿತ ಸಂಭವಿಸಿ 23 ಮಂದಿ ಮೃತಪಟ್ಟಿದ್ದಾರೆ. 39 ಜನರು ಗಾಯಗೊಂಡಿದ್ದಾರೆ.

ಮೃತರಲ್ಲಿ 14 ಪುರುಷರು, 11 ವರ್ಷದ ಒಬ್ಬ ಬಾಲಕ ಮತ್ತು ಎಂಟು ಮಹಿಳೆಯರು ಸೇರಿದ್ದಾರೆ. ಎಂಟು ಮಹಿಳೆಯರಲ್ಲಿ ಇಬ್ಬರು ಮಂಗಳೂರಿನವರು.

ಮಳೆ ಸುರಿಯುತ್ತಿದ್ದುದ್ದರಿಂದ ತುಂಬಾ ಜನ ಸೇತುವೆಯ ಚಾವಣಿಯ ಆಶ್ರಯ ಪಡೆದಿದ್ದರು. ಅಷ್ಟರಲ್ಲೇ ಎರಡೂ ನಿಲ್ದಾಣಗಳಿಗೆ ಐದು ರೈಲುಗಳು ಬಂದವು. ಅವುಗಳಿಂದ ಇಳಿದ ಪ್ರಯಾಣಿಕರು ಸೇತುವೆಯತ್ತ ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಗಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಆದರೆ ಕಾಲ್ತುಳಿತಕ್ಕೆ ‘ಇದೇ ಕಾರಣ’ ಎಂದು ರೈಲ್ವೆ ಪೊಲೀಸರಾಗಲೀ, ಪೊಲೀಸರಾಗಲೀ ದೃಢಪಡಿಸಿಲ್ಲ. ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಅವರು ಅವಘಡದ ತನಿಖೆ ನಡೆಸಲು ಉನ್ನತಾಧಿಕಾರಿಗಳ ತಂಡವನ್ನು ರಚಿಸಿದ್ದಾರೆ. ಜತೆಗೆ ಮುಂಬೈ ನಗರದ 136 ರೈಲು ನಿಲ್ದಾಣಗಳ ಸಾಮರ್ಥ್ಯ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ.

ಮೃತರ ಕುಟುಂಬಗಳಿಗೆ ಮಹಾರಾಷ್ಟ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ತಲಾ ₹ 5 ಲಕ್ಷ ಪರಿಹಾರ ಘೋಷಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.