ADVERTISEMENT

ಮುಂಬೈ ದಾಳಿ: ತಪ್ಪೊಪ್ಪಿಗೆ ನೀಡಲು ಜುಂದಾಲ್‌ಇಚ್ಛೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST

ಮುಂಬೈ (ಪಿಟಿಐ): 26/11ರ ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಯೋತ್ಪಾದಕ ಅಬು ಜುಂದಾಲ್ ಶುಕ್ರವಾರ ಮೆಟ್ರೋಪಾಲಿಟಿನ್ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾನೆ.

ಈಗಾಗಲೇ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಅಜ್ಮಲ್ ಕಸಾಬ್‌ನನ್ನು ಮುಖಾಮುಖಿಯಾದ ಮಾರನೇ ದಿನವೇ ಜುಂದಾಲ್ ಮುಖ್ಯ ಮೆಟ್ರೋಪಾಲಿಟಿನ್ ನ್ಯಾಯಾಧೀಶ ಪಿ.ಎಸ್. ರಾಥೋಡ್ ಅವರೆದುರು ತಪ್ಪೊಪ್ಪಿಗೆ ಹೇಳಿಕೆ ನೀಡಲು ಸಿದ್ಧ ಎಂದು ತಿಳಿಸಿದ್ದಾನೆ.

ಮುಂಬೈ ದಾಳಿಯಲ್ಲಿ ತನ್ನ ಪಾತ್ರವೇನಿತ್ತು ಎಂದು ವಿವರಿಸುವುದಾಗಿ ಆತ ತಿಳಿಸಿದ್ದಾನೆ. ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸುವ ವಿಧಾನ ಮತ್ತು ಅದರಿಂದಾಗುವ ಪರಿಣಾಮಗಳ ಬಗ್ಗೆ ನ್ಯಾಯಾಧೀಶರು ಜುಂದಾಲ್‌ಗೆ ವಿವರಿಸಿದರು ಎಂದು ಅಪರಾಧ ವಿಭಾಗದ ಪೊಲೀಸ್ ಮೂಲಗಳು ತಿಳಿಸಿವೆ.

ಹೇಳಿಕೆ ನೀಡುವ ಬಗ್ಗೆ ಪುನಃ ವಿಚಾರ ಮಾಡುವಂತೆ ತಿಳಿಸಿದ ನ್ಯಾಯಾಧೀಶರು, ಎರಡು ದಿನಗಳ ನಂತರ ಹಾಜರುಪಡಿಸಿದಾಗ ತಪ್ಪೊಪ್ಪಿಗೆ ಹೇಳಿಕೆ ನೀಡಿದರೆ ನಿಯಮದ ಪ್ರಕಾರ ದಾಖಲಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದುವರೆಗೆ ಅಪರಾಧ ವಿಭಾಗದ ಪೊಲೀಸರ ವಶದಲ್ಲಿದ್ದ ಜುಂದಾಲ್‌ನನ್ನು ಶುಕ್ರವಾರದಿಂದ ಅರ್ಥರ್ ರಸ್ತೆಯ ಕೇಂದ್ರ ಕಾರಾಗೃಹದಲ್ಲಿ ಒಂಟಿ ಸೆಲ್‌ನಲ್ಲಿ ಇರಿಸಲಾಗಿದೆ. ಯಾರ ಪ್ರಭಾವಕ್ಕೂ ಒಳಗಾಗದೆ ಸ್ವಪ್ರೇರಣೆಯಿಂದ ಹೇಳಿಕೆ ನೀಡಲಿ ಎಂಬ ಉದ್ದೇಶದಿಂದ ಒಂಟಿ ಸೆಲ್‌ನಲ್ಲಿ ಬಂಧಿಸಿಡಲು ನ್ಯಾಯಾಧೀಶರು ಸೂಚಿಸಿದ್ದಾರೆ.

ಜುಂದಾಲ್‌ನನ್ನು ನ್ಯಾಯಾಲಯಕ್ಕೆ ಕರೆ ತಂದ ಕೂಡಲೇ ಇತರ ಕಕ್ಷಿದಾರರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಹೊರಗೆ ಹೋಗುವಮತೆ ಸೂಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.