ADVERTISEMENT

ಮುಂಬೈ ಪಾಲಿಕೆ: ಕಾಂಗ್ರೆಸ್- ಎನ್‌ಸಿಪಿ ನಡುವೆ ಹಗ್ಗಜಗ್ಗಾಟ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ನವದೆಹಲಿ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಉಪಟಳದಿಂದ ಬಸವಳಿದಿರುವ ಕಾಂಗ್ರೆಸ್‌ಗೆ ಈಗ ಮಹಾರಾಷ್ಟ್ರದ ಶರದ್ ಪವಾರ್ ಹೊಸ `ತಲೆ ಬೇನೆ~ ಉಂಟುಮಾಡಿದ್ದಾರೆ.

ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣಾಪೂರ್ವ ಕ್ಷೇತ್ರ ಹೊಂದಾಣಿಕೆ ವಿಚಾರದಲ್ಲಿ ಕಾಂಗ್ರೆಸ್- ಎನ್‌ಸಿಪಿ ಹಗ್ಗಜಗ್ಗಾಟ ಮುಂದುವರಿದಿದ್ದು, ಅಂತಿಮ ನಿರ್ಧಾರ ಇನ್ನೂ ಸಾಧ್ಯವಾಗಿಲ್ಲ. ಚುನಾವಣೆ ಫೆ. 16ರಂದು ನಡೆಯಲಿದೆ.

232 (ನಾಮನಿರ್ದೇಶನ ಸದಸ್ಯರು ಸೇರಿ) ಸದಸ್ಯ ಬಲ ಇರುವ ಬಿಎಂಸಿಯಲ್ಲಿ 65 ಕ್ಷೇತ್ರಗಳನ್ನು ಬಿಟ್ಟುಕೊಂಡುವಂತೆ ಎನ್‌ಸಿಪಿ ಒತ್ತಾಯಿಸಿದೆ. 35 ಕ್ಷೇತ್ರದ ಮೇಲೆ ಒಂದೂ ಸೀಟು ನೀಡುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್, ಮಿತ್ರ ಪಕ್ಷದ ಒತ್ತಡ ಹೆಚ್ಚಾದ ಕಾರಣ 50 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಹೊಸ ಪ್ರಸ್ತಾವ ಮುಂದಿಟ್ಟಿದೆ. ಕ್ಷೇತ್ರ ಹೊಂದಾಣಿಕೆ ಬಗ್ಗೆ ಸೋಮವಾರದೊಳಗೆ ಅಂತಿಮ ನಿರ್ಧಾರ ಆಗಬೇಕು ಎಂದು ಎನ್‌ಸಿಪಿ ಮುಖ್ಯಸ್ಥರೂ ಆದ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕಾಂಗ್ರೆಸ್‌ಗೆ ಗಡುವು ನೀಡಿದ್ದರು. ಆದರೆ ಇದು ಸಾಧ್ಯವಾಗಿಲ್ಲ.

ಸೀಟು ಹೊಂದಾಣಿಕೆ ಗೊಂದಲದ ಬಗ್ಗೆ ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಮಾತನಾಡಿ, `ಎನ್‌ಸಿಪಿ ಜೊತೆಗಿನ ಮೈತ್ರಿ ಬಿಎಂಸಿ ಚುನಾವಣೆಗೂ ಮುಂದುವರಿಯುತ್ತದೆ ಎಂಬ ವಿಶ್ವಾಸ ನಮಗಿದೆ. ಆದರೆ, ಆ ಪಕ್ಷದ ಬೇಡಿಕೆ ದುಬಾರಿಯಾದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಆಗ ಮೈತ್ರಿ ಮುರಿದು ಬಿದ್ದರೂ ಬೀಳಬಹುದು~ ಎಂದಿದ್ದಾರೆ.

ಎನ್‌ಸಿಪಿ ಹಿರಿಯ ಮುಖಂಡ ತಾರಿಕ್ ಅನ್ವರ್ ಕೂಡ ಮೈತ್ರಿ ಸಾಧ್ಯವಾಗದಿದ್ದರೆ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ದೆಹಲಿಗೆ ದೌಡಾಯಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಇನ್ನಿತರ ಹಿರಿಯ ಮುಖಂಡರನ್ನು ಭೇಟಿ ಮಾಡಿ ಇದೇ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.

2007ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಬೇರೆ ಬೇರೆಯಾಗಿಯೇ ಸ್ಪರ್ಧಿಸಿ, ಕಾಂಗ್ರೆಸ್ 83 ಮತ್ತು ಎನ್‌ಸಿಪಿ 19 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು. ಆದರೆ, 85 ಸ್ಥಾನ ಪಡೆದ ಶಿವಸೇನೆ, 29 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದ ಬಿಜೆಪಿ ಅಧಿಕಾರ ಹಿಡಿದಿದ್ದವು.

ಇಂದು ಸಭೆ
(ಮುಂಬೈ ವರದಿ): ಬಿಎಂಸಿ ಚುನಾವಣಾಪೂರ್ವ ಕ್ಷೇತ್ರ ಹೊಂದಾಣಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಮತ್ತು ಚುನಾವಣಾ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್- ಎನ್‌ಸಿಪಿ ಪಕ್ಷಗಳ ಹಿರಿಯ ಮುಖಂಡರ ಸಭೆ ಮಂಗಳವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT