ADVERTISEMENT

ಮುಖ್ಯಮಂತ್ರಿಗಳ ಬೆಂಬಲಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ):  ಸರ್ಕಾರಿ ಉದ್ಯೋಗಗಳಲ್ಲಿ ಇತರ ಹಿಂದುಳಿದ ವರ್ಗಗಳ ಅಡಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಕಳೆದ ಕೆಲವು ವಾರಗಳಿಂದ  ಪ್ರತಿಭಟನೆ ನಡೆಸುತ್ತಿರುವ ಜಾಟ್ ಸಮುದಾಯಕ್ಕೆ ಉತ್ತರ ಪ್ರದೇಶ ಮತ್ತು ಹರಿಯಾಣ ಮುಖ್ಯಮಂತ್ರಿಗಳು ಬೆಂಬಲ ನೀಡುವಂತೆ ತೋರುತ್ತಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ.

ಜಾಟ್‌ರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಂದರೆಯಾಗುತ್ತದೆ ಎಂದು ದೆಹಲಿ ಜಲ ಮಂಡಳಿ ಮತ್ತು ಭಾರತೀಯ ತೈಲ ನಿಗಮ (ಐಒಸಿ) ತುರ್ತು ಅರ್ಜಿ ಸಲ್ಲಿಸಿದ್ದವು. ಹೋಳಿ ಹಬ್ಬದ ರಜೆಯ ಹೊರತಾಗಿಯೂ ನ್ಯಾಯಮೂರ್ತಿಗಳಾದ ಅಲ್ತಮಾಸ್ ಕಬೀರ್ ಮತ್ತು ದಲ್ವೀರ್ ಭಂಡಾರಿ ಅವರನ್ನು ಒಳಗೊಂಡ ಪೀಠ  ಗುರುವಾರ ಅರ್ಜಿಯ ವಿಚಾರಣೆ ನಡೆಸಿತು.

ನೀರು, ಹಾಲು ಮತ್ತು ಹಾಲಿನ ಉತ್ಪನ್ನ, ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ದಿನನಿತ್ಯದ ಜೀವನಾವಶ್ಯಕ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅಡ್ಡಿಯಾಗದಂತೆ ಎಲ್ಲ ಅಗತ್ಯ ಮುಂಜಾಗ್ರಾತ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಯಮೂರ್ತಿಗಳು ಉತ್ತರ ಪ್ರದೇಶ, ರಾಜಸ್ತಾನ ಮತ್ತು ಹರ್ಯಾಣ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.