ADVERTISEMENT

ಮೂರ್ತಿ ಹೇಳಿಕೆಗೆ ಅಮರ್ತ್ಯ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ): ‘ಗೋಧ್ರಾದಲ್ಲಿ 2002ರಲ್ಲಿ ನಡೆದ ಗಲಭೆಯನ್ನು 1984ರ ಸಿಖ್‌ ವಿರೋಧಿ ದಂಗೆಗೆ ಹೋಲಿಸಲಾಗದು’ ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಗೋಧ್ರಾ ಹಿಂಸಾಚಾರ ಅಡ್ಡಿಯಾಗಬಾರದು ಎಂದು ಇನ್ಫೊಸಿಸ್‌ ಮುಖ್ಯಸ್ಥ ಎನ್‌.ಆರ್‌.ನಾರಾಯಣ ಮೂರ್ತಿ ನೀಡಿದ ಹೇಳಿಕೆಯನ್ನು ಸೇನ್‌ ಇದೇ ವೇಳೆ ಅಲ್ಲಗಳೆದಿದ್ದಾರೆ.

ಸಿಖ್‌ ವಿರೋಧಿ ದಂಗೆಗೆ ಕಾರಣರಾದವರನ್ನು ಶಿಕ್ಷೆಗೆ ಒಳಪಡಿಸದಿರುವುದು ‘ತೀರ ನಾಚಿಕೆಗೇಡು’ ಎಂದು ಹೀಗಳೆದಿರುವ ಅವರು, ‘ಗೋಧ್ರಾ ಗಲಭೆಗೂ ಸಿಖ್‌ ವಿರೋಧಿ ದಂಗೆಗೂ ವ್ಯತ್ಯಾಸ ಗುರುತಿಸಬೇಕು’ ಎಂದಿದ್ದಾರೆ.

‘ಸೋನಿಯಾ ಗಾಂಧಿ, ರಾಹುಲ್‌ ಹಾಗೂ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಸಿಖ್‌ ವಿರೋಧಿ ದಂಗೆಗೆ ಕಾರಣರಾಗಿರಲಿಲ್ಲ. ಈ ವಿಷಯವಾಗಿ ಯಾರೂ ಇವರ ಮೇಲೆ ಗೂಬೆ ಕೂರಿಸಿಲ್ಲ. ಆದರೆ ಗೋಧ್ರಾ ಹಿಂಸಾಚಾರ ನಡೆದಾಗ ಮೋದಿ, ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು ಎನ್ನುವುದನ್ನು ಗಮನಿಸಬೇಕು‘ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸೇನ್‌  ಹೇಳಿದ್ದಾರೆ.

‘ಗುಜರಾತ್‌ನಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸಲಾಗುತ್ತಿದೆ. ಇದೊಂದು ನಿರಂತರ ಸಮಸ್ಯೆಯಾಗಿದೆ. ನಾರಾಯಣ ಮೂರ್ತಿ ನನ್ನ ಆಪ್ತರು. ಹಾಗೆಂದ ಮಾತ್ರಕ್ಕೆ ಮೋದಿ ಬಗ್ಗೆ ಅವರಾಡಿದ ಮಾತುಗಳನ್ನು ನಾನು ಒಪ್ಪಲಾಗದು’ ಎಂದೂ ಅವರು ಸ್ಪಷ್ಟಪಡಿಸಿದರು.

ಇತ್ತೀಚೆಗಿನ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಗಳು ಮೋದಿ ಅಲೆಯ ಫಲಶ್ರುತಿಯೇ ಅಥವಾ ಕಾಂಗ್ರೆಸ್‌ ವಿರೋಧಿ ಅಲೆ ಇಲ್ಲಿ ಕೆಲಸ ಮಾಡಿದೆಯೇ ಎಂಬ ಪ್ರಶ್ನೆಗೆ, ‘ ನನ್ನ ಪ್ರಕಾರ ಇದು ಕಾಂಗ್ರೆಸ್‌ ವಿರೋಧಿ ಅಲೆಯ ಪರಿಣಾಮ. ಅಂದರೆ, ಕಾಂಗ್ರೆಸ್‌ ಶಕ್ತಿಗುಂದಿದೆ ಎನ್ನುವುದು ಇದರ ಅರ್ಥ. ಕಾಂಗ್ರೆಸ್‌ನಲ್ಲಿನ ನಾಯಕತ್ವದ ಬಿಕ್ಕಟ್ಟು ಮೋದಿ ಅವರಿಗೆ ಲಾಭವಾಗಿದೆ ಎಂದೂ ಹೇಳಬಹುದು’ ಎಂದು ವ್ಯಾಖ್ಯಾನಿಸಿದರು.

ಕಾಂಗ್ರೆಸ್‌ ಪಕ್ಷವು ರಾಹುಲ್‌ ಗಾಂಧಿ ಅವರನ್ನು ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಷಬೇಕು ಎನ್ನುತ್ತೀರಾ ಎಂಬ ಪ್ರಶ್ನೆಗೆ, ‘ಚುನಾವಣೆ  ಎದುರಿಸುವುದಕ್ಕೆ ತಂತ್ರಗಾರಿಕೆ ಬಹು ಮುಖ್ಯವಾಗುತ್ತದೆ’ ಎಂದರು. ಆಮ್‌ ಆದಿ ಪಕ್ಷವು ಭಾರತೀಯ ರಾಜಕೀಯ­ದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದೂ ಸೇನ್‌ ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.