ADVERTISEMENT

ಮೇಕೆದಾಟು ಯೋಜನೆಗೆ ಆಕ್ಷೇಪ

ಪ್ರಧಾನಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪತ್ರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಚೆನ್ನೈ (ಪಿಟಿಐ):  ಕಾವೇರಿ ನದಿಪಾತ್ರದಲ್ಲಿ ತಮಿಳುನಾಡಿನ ಅನುಮತಿ ಇಲ್ಲದೆ ಯಾವುದೇ ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ನೆರೆಯ ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಜೆ.ಜಯಲಲಿತಾ ಮಂಗಳವಾರ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗುವವರೆಗೂ ಕಾವೇರಿ ನದಿಪಾತ್ರದಲ್ಲಿ ಕರ್ನಾಟಕದ ಯಾವುದೇ ಯೋಜನೆಗಳಿಗೆ ಒಪ್ಪಿಗೆ ನೀಡದಂತೆ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆಯೂ ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಮೇಕೆದಾಟು ಜಲವಿದ್ಯುತ್ ಘಟಕ ನಿರ್ಮಾಣಕ್ಕಾಗಿ ಕಾವೇರಿ ನದಿಗೆ ಅಡ್ಡಲಾಗಿ ಮೂರು ಜಲಾಶಯಗಳ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕದ ಉದ್ದೇಶಿತ ಯೋಜನೆ ಕುರಿತಂತೆ ಮಾಧ್ಯಮಗಳ ವರದಿಗಳ ಬಗ್ಗೆ ಗಮನ ಸೆಳೆದಿರುವ ಜಯಾ, ಕೂಡಲೇ ಮಧ್ಯೆ ಪ್ರವೇಶಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಉದ್ದೇಶಿತ ಮೇಕೆದಾಟು ಜಲವಿದ್ಯುತ್ ಯೋಜನೆಯ ಬಗ್ಗೆ ಕಾವೇರಿ ನ್ಯಾಯಮಂಡಳಿ ಐತೀರ್ಪಿನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಈ ಯೋಜನೆ ಸಂಪೂರ್ಣವಾಗಿ ಅಕ್ರಮವಾಗಿದೆ. ಅಣೆಕಟ್ಟು ನಿರ್ಮಾಣದಿಂದಾಗಿ ನದಿ ನೀರು ಹರಿವು ಕುಂಠಿತಗೊಳ್ಳಲಿದ್ದು, ತಮಿಳುನಾಡಿನ ರೈತರು ಮತ್ತು        ಕೃಷಿ ಕ್ಷೇತ್ರದ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಒಪ್ಪಿಗೆ ಇಲ್ಲದೇ ಏಕಪಕ್ಷೀಯವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕರ್ನಾಟಕಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಇಲ್ಲದಿದ್ದರೆ ಒಕ್ಕೂಟ ವ್ಯವಸ್ಥೆಯ ಮೂಲ ತತ್ವ, ಆಶಯಗಳಿಗೆ ಧಕ್ಕೆಯಾಗುತ್ತದೆ ಎಂದು ಜಯಾ ಎಚ್ಚರಿಸಿದ್ದಾರೆ.
ಶಿವನಸಮುದ್ರ ಮತ್ತು ಮೇಕೆದಾಟು ಜಲವಿದ್ಯುತ್ ಯೋಜನೆಗಳನ್ನು ಸ್ಚತಂತ್ರವಾಗಿ ಅನುಷ್ಠಾನಗೊಳಿಸದಂತೆ ತಡೆಯಾಜ್ಞೆ ಕೋರಿ ಸಲ್ಲಿಸಿದ ವಿಚಾರಣಾವಧಿಯ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ನ್ಯಾಯಾಂಗದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ರಾಷ್ಟ್ರೀಯ ಜಲವಿದ್ಯುತ್ ನಿಗಮ ಅಥವಾ ಕೇಂದ್ರೀಯ ವಿದ್ಯುತ್ ಉತ್ಪಾದನಾ ಸಂಸ್ಥೆಗಳ ಸಹಯೋಗದಲ್ಲಿ ಮೇಕೆದಾಟು, ಶಿವನಸಮುದ್ರ, ಹೊಗೆನೇಕಲ್ ಮತ್ತು ರಾಸಿಮನಾಳ್ ಜಲವಿದ್ಯುತ್ ಯೋಜನೆಗಳನ್ನು ಅನುಷ್ಠನಗೊಳಿಸಬೇಕೆ ಹೊರತು ಸ್ವತಂತ್ರವಾಗಿ ಅನುಷ್ಠಾಣಗೊಳಿಸಲು ಅವಕಾಶ ನೀಡಬಾರದು ಎಂದು ಅವರು ಸಲಹೆ ಮಾಡಿದ್ದಾರೆ.

ಕಾವೇರಿ ನ್ಯಾಯಮಂಡಳಿಯ ಐತೀರ್ಪು ಅನುಷ್ಠಾನಕ್ಕಾಗಿ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ರಚಿಸುವಂತೆಯೂ ಜಲಸಂಪನ್ಮೂಲ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಜಯಾ, ಪ್ರಧಾನಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.