ನವದೆಹಲಿ (ಐಎಎನ್‌ಎಸ್): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾರರಿಗೆ ‘ನನ್ ಆಫ್ ದಿ ಎಬೊವ್’ (ನೋಟಾ) ವ್ಯವಸ್ಥೆಯನ್ನು ಚುನಾವಣಾ ಆಯೋಗ ಒದಗಿಸಲಿದೆ.
ಇಡೀ ಮತದಾನದ ಪ್ರಕ್ರಿಯೆ ವಿದ್ಯುನ್ಮಾನ ಮತಯಂತ್ರ (ಎವಿಎಂ) ಮೂಲಕ ನಡೆಯಲಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ಮತದಾರರಿಗೆ ಮತಯಂತ್ರದಲ್ಲಿ ‘ನೋಟಾ’ (ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡದಿರುವುದು) ವ್ಯವಸ್ಥೆ ಒದಗಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಬುಧವಾರ ತಿಳಿಸಿದರು.
‘ನೋಟಾ’ ಬಳಕೆ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಗುವುದು. ಈ ನೂತನ ವ್ಯವಸ್ಥೆಯನ್ನು ಕಳೆದ ನವೆಂಬರ್–ಡಿಸೆಂಬರ್ ತಿಂಗಳಲ್ಲಿ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ವಿಶೇಷ ಚುನಾವಣಾ ವೀಕ್ಷಕರು: ಮುಂಬರುವ ಲೋಕಸಭಾ ಚುನಾವಣೆ ಸಂದರ್ಭ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ವಿಶೇಷ ಕೇಂದ್ರ ವೀಕ್ಷಕರನ್ನು ಕಳುಹಿಸಲಿದೆ. ಕ್ಷೇತ್ರ ಮಟ್ಟದಲ್ಲಿ ಚುನಾವಣಾ ವ್ಯವಸ್ಥೆಯ ಸಮರ್ಪಕ ನಿರ್ವಹಣೆಯ ಹೊಣೆಯನ್ನು ಈ ವೀಕ್ಷಕರು ಹೊರಲಿದ್ದಾರೆ.
‘ಕಾಸಿಗಾಗಿ ಸುದ್ದಿ’ಯಂತಹ ಮಾಧ್ಯಮಗಳಿಗೆ ಸಂಬಂಧಿಸಿದ ವಿಷಯ, ಮತದಾನದ ಪ್ರಮಾಣ, ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯ ವ್ಯವಸ್ಥೆಯನ್ನೂ ವೀಕ್ಷಕರು ಪರಿಶೀಲಿಸುವರು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.