ADVERTISEMENT

ಮೊಬೈಲ್‌ಗೆ ಹವಾಮಾನ ಮುನ್ನೆಚ್ಚರಿಕೆ

ಹವಾಮಾನ ಇಲಾಖೆಯ ಹೊಸ ಉಪಕ್ರಮ

ಪಿಟಿಐ
Published 27 ಮೇ 2018, 19:30 IST
Last Updated 27 ಮೇ 2018, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ನವದೆಹಲಿ: ಜನರಿಗೆ ನೇರವಾಗಿ ಹವಾಮಾನ ಮುನ್ನೆಚ್ಚರಿಕೆಗಳನ್ನು ನೀಡುವುದಕ್ಕಾಗಿ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಜತೆಗೆ ಕೈಜೋಡಿಸಿದೆ.

ಐಎಂಡಿ ನಿರ್ದಿಷ್ಟವಾದ ಮುನ್ನೆಚ್ಚರಿಕೆಗಳನ್ನು ನೀಡುತ್ತಿಲ್ಲ ಎಂದು ಇತ್ತೀಚೆಗೆ ತೀವ್ರ ಟೀಕೆಗೆ ಒಳಗಾಗಿತ್ತು. ಕೆಲವು ರಾಜ್ಯ ಸರ್ಕಾರಗಳು ಕೂಡ ಐಎಂಡಿಯನ್ನು ತರಾಟೆಗೆ ತೆಗೆದುಕೊಂಡಿದ್ದವು. ಈ ಆರೋಪಗಳನ್ನು ಐಎಂಡಿ ಅಲ್ಲಗಳೆದಿತ್ತು.

‘ಜನರಿಗೆ ನೇರವಾಗಿ ಹವಾಮಾನ ಮುನ್ನೆಚ್ಚರಿಕೆಗಳನ್ನು ನೀಡುವುದಕ್ಕಾಗಿ ಬಿಎಸ್‌ಎನ್‌‌ಎಲ್‌ ಜತೆಗೆ ಕೈಜೋಡಿಸಲು ಐಎಂಡಿ ಯತ್ನಿಸುತ್ತಿದೆ. ಈಗ ಇದಕ್ಕಾಗಿ ತಂತ್ರಜ್ಞಾನವೊಂದನ್ನು ಬಿಎಸ್‌ಎನ್‌ಎಲ್‌ ಅಭಿವೃದ್ಧಿ ಪಡಿಸಿದೆ. ಐಎಂಡಿ ಮುನ್ನೆಚ್ಚರಿಕೆಯನ್ನು ಕಳುಹಿಸಿದರೆ ಅದನ್ನು ಎಲ್ಲ ಬಿಎಸ್‌ಎನ್‌ಎಲ್‌ ಮೊಬೈಲ್‌ಗಳಿಗೆ ಕಳುಹಿಸಲಾಗುವುದು’ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್‌ ಹೇಳಿದ್ದಾರೆ.

ADVERTISEMENT

ಪ್ರದೇಶ ನಿರ್ದಿಷ್ಟ ಮುನ್ನೆಚ್ಚರಿಕೆಗಳನ್ನೂ ನೀಡಲಾಗುವುದು. ಬಿಎಸ್‌ಎನ್‌ಎಲ್‌ ಗ್ರಾಹಕನೊಬ್ಬ ಒಂದು ಪ್ರದೇಶದಲ್ಲಿ ಇದ್ದರೆ ಅಲ್ಲಿನ ಹವಾಮಾನಕ್ಕೆ ಸಂಬಂಧಿಸಿದ ಎಚ್ಚರಿಕೆಗಳನ್ನು ಆತನ ಮೊಬೈಲ್‌ಗೆ ಕಳುಹಿಸಲಾಗುವುದು. ಗ್ರಾಹಕ ಬೇರೊಂದು ಸ್ಥಳಕ್ಕೆ ಹೋದಾಗ ಆ ಸ್ಥಳಕ್ಕೆ ಸಂಬಂಧಿಸಿ ಮಾಹಿತಿ ಒದಗಿಸಲಾಗುವುದು.

ಗ್ರಾಹಕ ಆ ದೂರಸಂಪರ್ಕ ವಲಯದ ವ್ಯಾಪ್ತಿಯ ಗ್ರಾಹಕನೇ ಆಗಿರ ಬೇಕೆಂದಿಲ್ಲ. ಉದಾಹರಣೆಗೆ, ದೆಹಲಿಯ ಗ್ರಾಹಕ ಪುಣೆಗೆ ಹೋದರೆ, ಆತ ಪುಣೆಯಲ್ಲಿ ಇದ್ದಷ್ಟೂ ದಿನ ಪುಣೆಗೆ ಸಂಬಂಧಿಸಿದ ಹವಾಮಾನ ಏರುಪೇರುಗಳ ಮಾಹಿತಿ ಲಭ್ಯವಾಗುತ್ತದೆ ಎಂದು ರಾಜೀವನ್‌ ತಿಳಿಸಿದ್ದಾರೆ.

ಸದ್ಯಕ್ಕೆ ಇದನ್ನು ಪ್ರಾಯೋಗಿಕ ನೆಲೆಯಲ್ಲಿ ಜಾರಿಗೊಳಿಸಲಾಗುವುದು. ಯಶಸ್ವಿಯಾದರೆ ಹವಾಮಾನ ವಿಶ್ಲೇಷಣೆ ನಡೆಸುವ ಇತರ ಸಂಸ್ಥೆಗಳನ್ನೂ ಸೇರಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆಯ ಮಿತಿ

ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೆಯಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಹಲವು ಮಿತಿಗಳಿವೆ. ಚಂಡಮಾರುತದಂತಹ  ಸನ್ನಿವೇಶಗಳು ಕೆಲವೇ ತಾಸುಗಳಲ್ಲಿ ರೂಪುಗೊಳ್ಳುತ್ತವೆ. ಎರಡು–ಮೂರು ತಾಸುಗಳಲ್ಲಿ ವಿನಾಶ ಉಂಟು ಮಾಡುತ್ತವೆ ಎಂದು ರಾಜೀವನ್‌ ಹೇಳಿದ್ದಾರೆ.

ಹೊಸ ಉಪಕ್ರಮಕ್ಕೆ ಕಾರಣ

ಈ ತಿಂಗಳಲ್ಲಿ ಉತ್ತರ ಭಾರತದಲ್ಲಿ ಬೀಸಿದ ಚಂಡಮಾರುತದಿಂದಾಗಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶವೊಂದ ರಲ್ಲಿಯೇ ನೂರಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು. 2016ರಲ್ಲಿ ಹವಾಮಾನ ಏರುಪೇರಿಗೆ 1,600ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಇದರಲ್ಲಿ ಬಿಸಿಗಾಳಿಗೆ ಬಲಿಯಾದವರ ಸಂಖ್ಯೆಯೇ ಹೆಚ್ಚು.

ಈ ಸಂದರ್ಭಗಳಲ್ಲಿ, ಐಎಂಡಿ ನಿರ್ದಿಷ್ಟ ಮುನ್ನೆಚ್ಚರಿಕೆ ನೀಡಿಲ್ಲ ಎಂಬ ಟೀಕೆ ಕೇಳಿ ಬಂದಿತ್ತು.

ಹವಾಮಾನ ವೈಪರೀತ್ಯಗಳ ಸಂದರ್ಭಗಳಲ್ಲಿ ಜನರು ಏನು ಮಾಡಬೇಕು ಎಂಬ ನಿರ್ದಿಷ್ಟ ಎಚ್ಚರಿಕೆ ಅಥವಾ ಮಾಹಿತಿಯನ್ನು ಜನರಿಗೆ ನೇರವಾಗಿ ತಲುಪಿಸಲು ಸಾಧ್ಯವೇ ಎಂದು ಪ್ರಧಾನಿ ಕಾರ್ಯಾಲಯವು ಐಎಂಡಿಯನ್ನು ಕೇಳಿತ್ತು.

* ಹವಾಮಾನ ಮುನ್ನೆಚ್ಚರಿಕೆಯನ್ನು ಸಿದ್ಧಪಡಿಸುವುದು ಮಾತ್ರ ಐಎಂಡಿ ಕೆಲಸ. ಅದನ್ನು ಜನರಿಗೆ ತಲುಪಿಸಲು ಬೇರೊಂದು ಸಂಸ್ಥೆಯ ಅಗತ್ಯ ಇದೆ

–ಹವಾಮಾನ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.