ನವದೆಹಲಿ (ಐಎಎನ್ಎಸ್): ನೈಸರ್ಗಿಕ ಅನಿಲದ ಕೃತಕ ಅಭಾವ ಸೃಷ್ಟಿಸಿ, ದರ ನಿಗದಿ ಮಾಡುತ್ತಿರುವ ಆಪಾದನೆಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯಿಲಿ ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಖಟ್ಲೆ ದಾಖಲಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಮಂಗಳವಾರ ನಗರದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆಜ್ಞಾಪಿಸಿದರು.
ಮೊಯಿಲಿ ಅವರಿಗಿಂತ ಹಿಂದೆ ಪೆಟ್ರೋಲಿಯಂ ಸಚಿವರಾಗಿದ್ದ ಮುರಳಿ ದೇವ್ರಾ ಮತ್ತು ಹೈಡ್ರೋ ಕಾರ್ಬನ್ಸ್ ನ ಮಾಜಿ ಆಡಳಿತ ನಿರ್ದೇಶಕ ವಿ.ಕೆ. ಸಿಬಲ್ ಅವರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಕೇಜ್ರಿವಾಲ್ ಅವರ ಆಪಾದನೆಗಳನ್ನು ತಳ್ಳಿಹಾಕಿರುವ ಮೊಯಲಿ ಅವರು 'ಅವರ (ಕೇಜ್ರಿವಾಲ್) ಅಜ್ಞಾನದ ಬಗ್ಗೆ ನಾವು ಕನಿಕರ ಪಡುತ್ತೇವೆ. ಸರ್ಕಾರ ಹೇಗೆ ನಡೆಯುತ್ತದೆ, ಮಿತಿಗಳನ್ನು ಹೇಗೆ ಅನುಸರಿಸಲಾಗುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲ. ದರ ನಿಗದಿ ಪಡಿಸುವುದಕ್ಕೆ ಒಂದು ವ್ಯವಸ್ಥೆ ಇದೆ' ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು 'ಕೆಲವು ಸಚಿವರು ಮತ್ತು ಕೈಗಾರಿಕೋದ್ಯಮಿಗಳು ಕೃತಕ ಅನಿಲ ಅಭಾವ ಸೃಷ್ಟಿಸುವಲ್ಲಿ ಮತ್ತು ಅನಗತ್ಯವಾಗಿ ಬೆಲೆ ಏರಿಕೆ ಮಾಡುವಲ್ಲಿ ಷಾಮೀಲಾಗಿರುವ ಆರೋಪಗಳ ಬಗ್ಗೆ ಕೆಲವು ಗಣ್ಯರಿಂದ ತಮಗೆ ದೂರುಗಳು ಬಂದಿವೆ' ಎಂದು ನುಡಿದರು.
'ಮುರಳಿ ದೇವ್ರಾ, ವೀರಪ್ಪ ಮೊಯಿಲಿ, ವಿ.ಕೆ. ಸಿಬಲ್, ಮುಖೇಶ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇತರರ ವಿರುದ್ಧ ಕ್ರಿಮಿನಲ್ ಖಟ್ಲೆಗಳನ್ನು ದಾಖಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಾವು ಸೂಚಿಸಿದ್ದೇವೆ' ಎಂದು ಮುಖ್ಯಮಂತ್ರಿ ಹೇಳಿದರು.
ಆಂಧ್ರ ಕರಾವಳಿ ತೀರದ ಕೃಷ್ಣಾ-ಗೋದಾವರಿ ಜಲಾನಯನ ಪ್ರದೇಶದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಗೆ ನೀಡಲಾದ ಅನಿಲ ನಿಕ್ಷೇಪಗಳನ್ನು ಹಿಂತೆಗೆದುಕೊಂಡು ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ ವಹಿಸಬೇಕು ಎಂದೂ ಕೇಜ್ರಿವಾಲ್ ಆಗ್ರಹಿಸಿದರು.
ವಿಷಯವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಜೊತೆಗೂ ಚರ್ಚಿಸುವುದಾಗಿ ನುಡಿದ ದೆಹಲಿ ಮುಖ್ಯಮಂತ್ರಿ ಏಪ್ರಿಲ್ 1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಅನಿಲ ಬೆಲೆ ಏರಿಕೆಯನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸುವುದಾಗಿಯೂ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.