ADVERTISEMENT

ಮೋದಿ `ಕ್ಲೀನ್ ಚಿಟ್' ಪ್ರಶ್ನಿಸಿದ ಖುರ್ಷಿದ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 11:32 IST
Last Updated 19 ಮಾರ್ಚ್ 2014, 11:32 IST

ಫರೂಕಾಬಾದ (ಉತ್ತರ ಪ್ರದೇಶ) (ಪಿಟಿಐ): ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಕೆಳ ನ್ಯಾಯಾಲಯವು `ಕ್ಲೀನ್ ಚಿಟ್' ನೀಡಿರುವುದನ್ನು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ಪ್ರಶ್ನಿಸುವ ಮೂಲಕ ಹೊಸ ವಿವಾದದ ತಿದಿಯೊತ್ತಿದ್ದಾರೆ.

ಮಂಗಳವಾರ ಪತ್ರಕರ್ತರ ಪ್ರಶ್ನೆಯೊಂದಕ್ಕೆ  ಪ್ರತಿಕ್ರಿಯಿಸಿದ ಖುರ್ಷಿದ್ ಅವರು `ಮ್ಯಾಜಿಸ್ಟ್ರೆಟ್ ನ್ಯಾಯಾಲಯವು ಅವರಿಗೆ ಸಮನ್ಸ್ ಕಳುಹಿಸಿಲ್ಲ... ಇದು ಸತ್ಯ... ಇದೊಂದು ರೀತಿ ನರ್ಸರಿ ವಿದ್ಯಾರ್ಥಿ ಉತ್ತಮ ಶ್ರೇಣಿ ಪಡೆದಂತಿದೆ. ನಾನೊಬ್ಬ ಡಾಕ್ಟರ್ ಎಂದು ಭಾವಿಸಿಕೊಂಡು ಆತ ಹೋದಲೆಲ್ಲಾ ಪಿಎಚ್‌ಡಿ ಪಡೆದಿರುವೆ ಎಂದು ಹೇಳಿಕೊಂಡಂತಿದೆ. ಇದು ಹೇಗೆ ಜರಗಿತು?' ಎಂದು ಪ್ರಶ್ನಿಸಿದರು.

`ಗುಜರಾತ್‌ನಲ್ಲಿ ಗಲಭೆ ಸಂಭವಿಸಿದಾಗ ಅವರು (ಮೋದಿ) ಮುಖ್ಯಮಂತ್ರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 170 ಜನರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಮಾಯಾ ಕೊಡ್ನಾನಿ ಆ ಸಮಯದಲ್ಲಿ ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು' ಎಂದು ಖುರ್ಷಿದ್ ಹೇಳಿದರು.

ಕಳೆದ ತಿಂಗಳವಷ್ಟೇ ಮೋದಿ ಅವರನ್ನು `ಷಂಡ' ಎಂದು ಕರೆಯುವ ಮೂಲಕ ಖುರ್ಷಿದ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೆಂಗಣ್ಣಿಗೆ ಗುರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.