ADVERTISEMENT

ಮೋದಿ ವಾದ- ಎಸ್‌ಐಟಿ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ಅಹಮದಾಬಾದ್ (ಪಿಟಿಐ): 2002ರ ಗುಲ್‌ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ `ಕ್ರಿಯೆಗೆ ತಕ್ಕ ಪ್ರತಿಕಿಯೆ~ ವಾದವನ್ನು ಸಮರ್ಥಿಸಿಕೊಂಡಿರುವ ಸುಪ್ರೀಂಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರು ನಡೆಸಿದ್ದ ಗುಂಡಿನ ದಾಳಿಯು, ನಂತರ 69 ಜನರ ಸಾವಿಗೆ ಎಡೆ ಮಾಡಿಕೊಟ್ಟಿತು ಎಂದು ತಿಳಿಸಿದೆ.

ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು ನ್ಯೂಟನ್‌ನ `ಕ್ರಿಯೆಗೆ ತಕ್ಕ ಪ್ರತಿಕ್ರಿಯೆ~ ನಿಯಮವನ್ನು ಉಲ್ಲೇಖಿಸುತ್ತಾ ಖಂಡನಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ, ಮೋದಿ ವಿರುದ್ಧ ಆರೋಪ ಮಾಡಿದ್ದರು.

 ಸಂದರ್ಶನದ ವೇಳೆ ಜಾಫ್ರಿ ಅವರ ಕ್ರಮವನ್ನು `ಕ್ರಿಯೆ~ ಹಾಗೂ ಬಳಿಕ ನಡೆದ ಹತ್ಯಾಕಾಂಡವನ್ನು `ಪ್ರತಿಕ್ರಿಯೆ~ ಎಂದು ಮೋದಿ ಬಣ್ಣಿಸಿದ್ದರು ಎಂದು ಎಸ್‌ಐಟಿ ತಿಳಿಸಿದೆ.ನರೇಂದ್ರ ಮೋದಿ ಅವರ ಈ ಹೇಳಿಕೆಯಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗದು ಎಂದು ಹೇಳಿ ಎಸ್‌ಐಟಿ, ಮೋದಿ ಅವರನ್ನು ದೋಷಮುಕ್ತಗೊಳಿಸಿದೆ.

 ಹಿಂಸಾನಿರತ ಗುಂಪಿನ ಮೇಲೆ ಜಾಫ್ರಿ ಮೊದಲು ಗುಂಡಿನ ಮಳೆಗರೆದರು. ಇದರಿಂದ ಉದ್ವಿಗ್ನಗೊಂಡ ಗುಂಪು ಗುಲ್‌ಬರ್ಗ್ ಸೊಸೈಟಿಯೊಳಗೆ ನುಗ್ಗಿ ಬೆಂಕಿ ಹಚ್ಚಿತು ಎಂದು 2002ರ ಮಾರ್ಚ್ ಒಂದರಂದು ನೀಡಿದ್ದ ಸಂದರ್ಶನದ ವೇಳೆ ಮೋದಿ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಹೇಳಿದ್ದರು ಎಂದು ಎಸ್‌ಐಟಿ ವರದಿ ತಿಳಿಸಿದೆ.

ಇಷ್ಟೇ ಅಲ್ಲದೆ, ಗೋಧ್ರಾ ಹತ್ಯಾಕಾಂಡದ ಬಳಿಕ ಕೋಮು ಗಲಭೆಯನ್ನು ತಡೆಯಲು ಮೋದಿ ಸಾಧ್ಯವಿದ್ದ ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದ್ದರು ಎಂದು ಅದು ತಿಳಿಸಿದೆ.ಆದರೆ ಕೋಮು ಗಲಭೆ ನಡೆದ ನಾಲ್ಕು ವರ್ಷಗಳ ಬಳಿಕ ಜಾಕಿಯಾ ಅವರು ಮೋದಿ ಅವರ ವಿರುದ್ಧ ದೂರು ಸಲ್ಲಿಸಿದ ಉದ್ದೇಶವಾದರೂ ಏನು ಎಂದು ತನಿಖಾ ತಂಡ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಪ್ರಶ್ನಿಸಿದೆ.

ಗೋಧ್ರಾ ರೈಲು ಹತ್ಯಾಕಾಂಡದ ಪ್ರತೀಕಾರವನ್ನು ತೀರಿಸಲು ಹಿಂದೂಗಳಿಗೆ ಅವಕಾಶ ನೀಡುವಂತೆ 2002ರ ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ಮೋದಿ ಅವರು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು ಎಂಬ ಆರೋಪಗಳು ಆಧಾರರಹಿತವಾದವು ಎಂದೂ ಎಸ್‌ಐಟಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.