ADVERTISEMENT

ಮ್ಯಾನ್ಮಾರ್ ಅಭಿವೃದ್ಧಿಗೆ ಭಾರತ ನೆರವು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ನವದೆಹಲಿ, (ಐಎಎನ್‌ಎಸ್): ಇಲ್ಲಿ ನಡೆದ ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯೊಂದರಲ್ಲಿ, ಚೀನಾದ ಮಿತ್ರ ರಾಷ್ಟ್ರವಾದ ಮ್ಯಾನ್ಮಾರ್‌ನ ಅಭಿವೃದ್ಧಿ ಕಾರ್ಯಗಳಿಗಾಗಿ ಭಾರತ 50 ಕೋಟಿ ಡಾಲರ್ ಸಾಲದ ನೆರವು ಘೋಷಿಸಿದೆ. ಅಲ್ಲದೆ ಆ ದೇಶದೊಂದಿಗಿನ ಭಧ್ರತಾ ಸಹಕಾರವನ್ನು ಮತ್ತಷ್ಟು ಬಲಗೊಳಿಸಲು ನಿರ್ಧರಿಸಿದೆ.

ನಾಲ್ಕು ದಿನಗಳ ಭೇಟಿಗಾಗಿ ಇದೇ ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಮ್ಯಾನ್ಮಾರ್ ಅಧ್ಯಕ್ಷ ಥೀನ್ ಸೀನ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಆರ್ಥಿಕ, ಇಂಧನ, ಭದ್ರತಾ ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಸಂಬಂಧ ಬಲಪಡಿಸುವಿಕೆ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಇದಕ್ಕೆ ಮುನ್ನ ಥೀನ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಚೀನಾ ಬೆಂಬಲಿತ ಅಣೆಕಟ್ಟು ಯೋಜನೆಯ 3.5 ಶತಕೋಟಿ ಡಾಲರ್ ಹಣವನ್ನು ನಿರಾಕರಿಸಿದ್ದು, ರಾಜಕೀಯ ಮಾತುಕತೆಗಾಗಿ ಆಂಗ್ ಸಾನ್ ಸೂಕಿ ಅವರಿಗೆ ಆಹ್ವಾನದಂತಹ ನಿರ್ಣಾಯಕ ರಾಜಕೀಯ ಬೆಳವಣಿಗೆಗಳು ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ, ಅಲ್ಲಿನ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.