ADVERTISEMENT

ಯಡಿಯೂರಪ್ಪ ವಿರುದ್ಧದ ಎಫ್‌ಐಆರ್ ರದ್ದು :ಸುಪ್ರೀಂಗೆ ಸಲ್ಲಿಸಿದ್ದ ಮೇಲ್ಮನವಿ ವಾಪಸ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ `ಪ್ರಥಮ ಮಾಹಿತಿ ವರದಿ~ (ಎಫ್‌ಐಆರ್) ರದ್ದು ಮಾಡಿದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ)ಯನ್ನು ಜೆಡಿಎಸ್ ಮುಖಂಡ ಡಿ.ಎಂ. ವಿಶ್ವನಾಥ್ ಸೋಮವಾರ ಹಿಂತೆಗೆದುಕೊಂಡರು.

ನ್ಯಾ. ಟಿ.ಎಸ್. ಠಾಕೂರ್ ಹಾಗೂ ನ್ಯಾ. ಗ್ಯಾನ್‌ಸುಧಾ ಮಿಶ್ರ ಅವರನ್ನು ಒಳಗೊಂಡ ಪೀಠ ವಿಶೇಷ ಮೇಲ್ಮನವಿ ಹಿಂದಕ್ಕೆ ಪಡೆಯುವ ಸಂಬಂಧ ಶುಕ್ರವಾರ ಅರ್ಜಿ ಹಾಗೂ ಪ್ರಮಾಣ ಪತ್ರ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲ ಶ್ರೀಕುಮಾರ್ ಅವರಿಗೆ ಸೂಚಿಸಿತು.

ವಿಶ್ವನಾಥ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಹಿಂತೆಗೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಮಾರ್ಚ್‌ನಲ್ಲಿ ಯಡಿಯೂರಪ್ಪ ಅವರ ಮೇಲಿನ ಎಫ್‌ಐಆರ್ ರದ್ದು ಮಾಡಿದ ಹೈಕೋರ್ಟ್ ತೀರ್ಪನ್ನು ಇವರು ಪ್ರಶ್ನಿಸಿದ್ದರು. ಅಕ್ರಮ ಗಣಿಗಾರಿಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಮೇಲೆ ಆರೋಪ ಮಾಡಿದ್ದ ಲೋಕಾಯುಕ್ತ ವರದಿಯ ಕೆಲವು ಭಾಗವನ್ನು ಹೈಕೋರ್ಟ್ ರದ್ದುಪಡಿಸಿತ್ತು.

ಸುಪ್ರೀಂ ಕೋರ್ಟ್ ನೇತೃತ್ವದ ಉನ್ನತಾಧಿಕಾರ ಸಮಿತಿ ಯಡಿಯೂರಪ್ಪನವರ ವಿರುದ್ಧ ಸಿಬಿಐನಂಥ ಸಂಸ್ಥೆಯಿಂದ ತನಿಖೆಗೆ ಶಿಫಾರಸು ಮಾಡಿ ವರದಿ ಸಲ್ಲಿಸಿದೆ. ಜಿಂದಾಲ್ ಸ್ಟೀಲ್ ವರ್ಕ್ಸ್ ಹಾಗೂ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯಿಂದ ಅಕ್ರಮ `ದೇಣಿಗೆ~ ಪಡೆದ ಆರೋಪವನ್ನು ಮಾಜಿ ಮುಖ್ಯಮಂತ್ರಿ ಎದುರಿಸುತ್ತಿದ್ದಾರೆ.
ಸಿಇಸಿ ವರದಿ ಕುರಿತು ಸುಪ್ರೀಂ ಕೋರ್ಟ್ ಅರಣ್ಯ ಪೀಠ ತೀರ್ಮಾನ ಕೈಗೊಳ್ಳಲಿದೆ.
ಹಿಂದೆ ವಿಶ್ವನಾಥ್ ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.