ADVERTISEMENT

ರಷ್ಯಾ ಜತೆ ಒಪ್ಪಂದಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:18 IST
Last Updated 23 ಮಾರ್ಚ್ 2014, 19:18 IST

ನವದೆಹಲಿ (ಪಿಟಿಐ): ಕೂಡುಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಮೂರು ಮತ್ತು ನಾಲ್ಕನೇ ಘಟಕಕ್ಕೆ ಸಂಬಂಧಪಟ್ಟಂತೆ ರಷ್ಯಾ ಜತೆ ಒಪ್ಪಂದ ಮಾಡಿಕೊಳ್ಳುವ ದಿಸೆಯಲ್ಲಿ ಕೇಂದ್ರ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ.

ಒಪ್ಪಂದಕ್ಕೆ ಸಹಿ ಹಾಕಲು ಮೇ ತಿಂಗಳ ತನಕ ಅಂತಿಮ ಗಡುವು ಇದ್ದು, ಒಪ್ಪಂದಕ್ಕೆ ಸಹಿ ಹಾಕುವ ಸಂಬಂಧ ಭಾರತ, ರಷ್ಯಾ ಜತೆ ಇದ್ದ ಅಡೆತಡೆ­ಗಳನ್ನು ನಿವಾರಿಸಿಕೊಳ್ಳಬೇಕಿದೆ.

ಒಪ್ಪಂದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
3 ಮತ್ತು 4ನೇ ಘಟಕಕ್ಕೆ ಸಂಬಂಧ­ಪಟ್ಟಂತೆ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಈಗಾಗಲೇ ಯೋಜನೆಗೆ ಆರ್ಥಿಕ ಅನುಮೋದನೆ ನೀಡಿದೆ. ಲೋಕಸಭಾ ಚುನಾವಣೆಯ ಕಾರಣ ನೀತಿ ಸಂಹಿತೆ ಇರುವುದರಿಂದ ಸರ್ಕಾರ ಆದಷ್ಟು ಬೇಗ ಒಪ್ಪಂದಕ್ಕೆ ಸಹಿ ಹಾಕುವ ನಿಟ್ಟಿನಲ್ಲಿ ಆಯೋಗದ ಅನುಮತಿ ಪಡೆಯಲು ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

‘ಈಗಾಗಲೇ ನಮಗೆ ಸಂಸತ್‌ನ ಅನುಮೋದನೆ ದೊರೆಕಿದ್ದು, ಶೀಘ್ರದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು’ ಎಂದು ಪರಮಾಣು ಶಕ್ತಿ ಇಲಾಖೆ (ಡಿಎಇ)­ಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.ತನ್ನ ಅಧಿಕಾರಾವಧಿಯಲ್ಲೇ ಒಪ್ಪಂದಕ್ಕೆ ಸಹಿ ಹಾಕಲು ಯುಪಿಎ
ಸರ್ಕಾರ ಬಯಸಿದ್ದು, ಇದನ್ನು ತನ್ನ ಸಾಧನೆ ಎಂದೇ ಪರಿಗಣಿಸಿದೆ.

ಈಗಾ­ಗಲೇ ಕೂಡುಂಕುಳಂ ಪರಮಾಣು ಸ್ಥಾವ­ರದ ಮೊದಲ ಘಟಕದ ಕಾರ್ಯಗಳು ಪೂರ್ಣಗೊಂಡಿವೆ. ರಷ್ಯಾದೊಂದಿಗೆ ಸಹಿ ಹಾಕುವ
ನಿಟ್ಟಿನಲ್ಲಿ ‘ಸಿವಿಲ್ ಲಿಯಾಬಲಿಟಿ ಆಫ್ ನ್ಯೂಕ್ಲಿಯರ್ ಡ್ಯಾಮೇಜಸ್‌ಕಾಯ್ದೆ 2010’ ಪ್ರಕಾರ ಮುಖ್ಯ ಅಡೆತಡೆ­ಗಳಿದ್ದು, ಅದನ್ನು ನಿವಾರಿಸಿಕೊಳ್ಳಬೇಕಿದೆ.

ಇದೇ ಕಾರಣದಿಂದಾಗಿ ಕಳೆದ ಅಕ್ಟೋಬರ್‌ನಲ್ಲಿ ರಷ್ಯಾಕ್ಕೆ ತೆರಳಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು  ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.