ADVERTISEMENT

ರಸ್ತೆ ಮೂಲಕ ರೆಡ್ಡಿ ಬೆಂಗಳೂರಿಗೆ: ಇಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST

ಹೈದರಾಬಾದ್ (ಪಿಟಿಐ/ಐಎಎನ್‌ಎಸ್): ಅಸೋಸಿಯೆಟೆಡ್ ಮೈನಿಂಗ್ ಕಂಪೆನಿ (ಎಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿ ಶುಕ್ರವಾರ ಬೆಂಗಳೂರಿನ ಸಿಬಿಐ  ನ್ಯಾಯಾಲಯದ ಮುಂದೆ ಹಾಜರಾಗಬೇಕಿದ್ದು, ಸಿಬಿಐ ಪೊಲೀಸರು ರಸ್ತೆ ಮೂಲಕ ಅವರನ್ನು ಬೆಂಗಳೂರಿಗೆ ಕರೆದೊಯ್ದರು.

ಪ್ರಯಾಣದ ಅವಧಿ ಹಾಗೂ ಭದ್ರತೆ ಅಂಶಗಳನ್ನು ಗಮನಿಸಿ ತಮ್ಮದೇ ಖರ್ಚಿನಲ್ಲಿ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡುವಂತೆ ರೆಡ್ಡಿ ಹೈದರಾಬಾದ್‌ನ ಸಿಬಿಐ ನ್ಯಾಯಾಲಯಕ್ಕೆ ಗುರುವಾರ ಅರ್ಜಿ ಸಲ್ಲಿಸಿದ್ದರು.

ರಸ್ತೆ ಮಾರ್ಗದಲ್ಲಿ ತೆರಳಿದಲ್ಲಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಅವರು ಹೇಳಿದ್ದರು. ಹಾಗಾಗಿ ರೆಡ್ಡಿ ವಿಮಾನ ಮಾರ್ಗದಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆಯೇ ಅಥವಾ ರಸ್ತೆ ಮೂಲಕ ಪ್ರಯಾಣಿಸಲಿದ್ದಾರೆಯೇ ಎಂಬ ಕುರಿತು ಕುತೂಹಲ ಮೂಡಿತ್ತು.

ಆದರೆ, ವಿಶೇಷ ಸಿಬಿಐ ನ್ಯಾಯಾಲಯ ರೆಡ್ಡಿ ಅವರನ್ನು ಹೇಗೆ ಕರೆದೊಯ್ಯಬೇಕು ಎಂಬ ನಿರ್ಧಾರವನ್ನು ಜೈಲಿನ ನಿಯಮಾವಳಿಗಳಿಗೆ ಅನುಗುಣವಾಗಿ ಅಲ್ಲಿನ ಅಧಿಕಾರಿಗಳೇ ತೆಗೆದುಕೊಳ್ಳಬೇಕು ಎಂದು ಹೇಳಿತು. ಇದೇ ಸಂದರ್ಭದಲ್ಲಿ ತಮ್ಮ ಹೆಲಿಕಾಪ್ಟರ್ ಹಿಂದಿರುಗಿಸಬೇಕು ಎಂದು ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದಕ್ಕೆ ಹಾಕಿತು.

ಮಿನಿ ಬಸ್ ಪಯಣ: ಗುರುವಾರ ಸಂಜೆ ಹೊತ್ತಿಗೆ ಚಂಚಲಗುಡ ಕೇಂದ್ರ ಕಾರಾಗೃಹದಿಂದ ರೆಡ್ಡಿ ಅವರನ್ನು ಹೊರತಂದು ಮಿನಿ ಬಸ್‌ನಲ್ಲಿ ಕೂರಿಸಲಾಯಿತು.

ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಯಿತು. ಇಬ್ಬರು ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ 8 ಜನ ಪೊಲೀಸರು ರೆಡ್ಡಿ ಅವರ ಕಾವಲಿಗೆ ಇದ್ದರು.

ಹಿನ್ನೆಲೆ: ಒಬಳಾಪುರಂ ಮೈನಿಂಗ್ ಕಂಪೆನಿ (ಒಎಂಸಿ) ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು ಅವರನ್ನು ಹೈದರಾಬಾದ್‌ನ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದೆ.

ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಅರುಣಾ, ಅಸೋಸಿಯೆಟೆಡ್ ಮೈನಿಂಗ್ ಕಂಪೆನಿಯ ಮಾಲೀಕರಾಗಿದ್ದು, ಈ ಕಂಪೆನಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಸಿಬಿಐ ಕರ್ನಾಟಕ ಘಟಕ, ರೆಡ್ಡಿ ದಂಪತಿ, ಕಾಂಗ್ರೆಸ್ ನಾಯಕ ವಿ. ಮುನಿಯಪ್ಪ ಸೇರಿದಂತೆ ಇಪ್ಪತ ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT