ಇಂಪಾಲ್ (ಪಿಟಿಐ): ರಾಜಕೀಯ ಪ್ರವೇಶಿಸುವ ತಮ್ಮ ನಿರ್ಧಾರ ಬದಲಿಸುವುದಿಲ್ಲ ಎಂದು ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಹೇಳಿದ್ದಾರೆ.
ಮಣಿಪುರದಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಐ) ರದ್ದುಮಾಡಬೇಕು ಎಂದು ಆಗ್ರಹಿಸಿ ನಡೆಸುತ್ತಿದ್ದ 16 ವರ್ಷಗಳ ಉಪವಾಸ ಸತ್ಯಾಗ್ರಹವನ್ನು ಇತ್ತೀಚೆಗೆ ಅವರು ಅಂತ್ಯಗೊಳಿಸಿದ್ದಾರೆ.
ಶರ್ಮಿಳಾ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ನಂತರ ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರ ಈ ನಡೆಯನ್ನು ಅವರ ಕೆಲ ಬೆಂಬಲಿಗರು ವಿರೋಧಿಸುತ್ತಿದ್ದಾರೆ.
ಆದರೆ, ತಮ್ಮ ಮುಂದಿನ ನಡೆಯ ಬಗ್ಗೆ ಅಪಾರ ಭರವಸೆ ಹೊಂದಿರುವ ಶರ್ಮಿಳಾ ‘ಹೊಸ ಆರಂಭ’ದ ನಿರ್ಧಾರವನ್ನು ಬದಲಿಸುವುದಿಲ್ಲ ಎಂದು ಹೇಳಿದ್ದಾರೆ.
‘ನಾನು ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದೇನೆ. ನಾನು ಮುಖ್ಯಮಂತ್ರಿಯಾದರೆ ಎಎಫ್‌ಎಸ್‌ಪಿಐ ಕಾಯ್ದೆ ರದ್ದುಗೊಳಿಸಲು ಸಾಧ್ಯ’ ಎಂದು ಅವರು ತಿಳಿಸಿದ್ದಾರೆ.
‘ಒಂದು ವೇಳೆ ಜನ ನನ್ನನ್ನು ಬೆಂಬಲಿಸದಿದ್ದರೆ ನಾನು ನನ್ನದೇ ದಾರಿಯಲ್ಲಿ ಸಾಗುತ್ತೇನೆ’ ಎಂದಿದ್ದಾರೆ ಶರ್ಮಿಳಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.