ADVERTISEMENT

ರಾಜಕೀಯ ಮರುಜನ್ಮದ ನಿರೀಕ್ಷೆಯಲ್ಲಿ `ಬಾಪ'

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ವಿಶವದರ್ (ರಾಜ್‌ಕೋಟ್): ಸೌರಾಷ್ಟ್ರದ ವಿಶವದರ್, 84 ವರ್ಷದ ಹಿರಿಯ ರಾಜಕಾರಣಿ ಕೇಶುಭಾಯ್ ಪಟೇಲರ ಕೈ ಹಿಡಿಯುವುದೇ? ಮುಪ್ಪಿನ ಕಾಲದಲ್ಲಿ ಹೊಸ ಪಕ್ಷ ಕಟ್ಟುವ ಸಾಹಸ ಮಾಡಿರುವ ಮಾಜಿ ಮುಖ್ಯಮಂತ್ರಿಗೆ `ರಾಜಕೀಯ ಪುನರ್ಜನ್ಮ' ನೀಡುವುದೇ ಅಥವಾ ಸಾರ್ವಜನಿಕ ಜೀವನಕ್ಕೆ ವಿರಾಮ ಹಾಕುವುದೇ?

`ಕೇಶುಬಾಪ' ಎಂದು ಸೌರಾಷ್ಟ್ರದ ಜನ ಪ್ರೀತಿಯಿಂದ ಕರೆಯುವ ಕೇಶುಭಾಯ್ ಹನ್ನೊಂದು ವರ್ಷದ `ರಾಜಕೀಯ ಅಜ್ಞಾತವಾಸ'ದಿಂದ ಹೊರ ಬಂದಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಹೋದ ಬಳಿಕ ರಾಜಕೀಯ ದಿಕ್ಕುದೆಸೆ ಕಾಣದೆ ತಲೆ ಕೆಡಿಸಿಕೊಂಡು ಒದ್ದಾಡಿದ್ದರು. ಬಿಜೆಪಿಯಲ್ಲೇ ಇರಬೇಕೇ ಅಥವಾ ಬೇರೆ ಪಕ್ಷ ಕಟ್ಟಬೇಕೇ ಎಂಬ ಗೊಂದಲ ಪರಿಹರಿಸಿಕೊಂಡು ಈಗ ಹೊಸ ದಾರಿಯಲ್ಲಿ ಮುನ್ನಡೆದಿದ್ದಾರೆ.

`ಗುಜರಾತ್ ಪರಿವರ್ತನಾ ಪಕ್ಷ' (ಜಿಪಿಪಿ) ಕಟ್ಟಿ `ಕ್ರಿಕೆಟ್ ಬ್ಯಾಟ್' ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಜುನಾಗಢ ಜಿಲ್ಲೆಯ ವಿಶವದರ್ ಕ್ಷೇತ್ರದಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಅವರು ಹೊರಟಿದ್ದಾರೆ. ಮಾಜಿ ಮುಖ್ಯಮಂತ್ರಿ ಈ ಕ್ಷೇತ್ರದವರಲ್ಲದಿದ್ದರೂ ಮತದಾರರು ಅವರಿಗೆ ಅಪರಿಚಿತರೇನಲ್ಲ. ಮುಖ್ಯಮಂತ್ರಿ ಆಗಿದ್ದಾಗ ಎರಡು ಸಲ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಹದಿನಾಲ್ಕು ವರ್ಷದ ಬಳಿಕ ಮರಳಿ ಬಂದಿದ್ದಾರೆ.

ವಿಶವದರ್‌ನಲ್ಲಿ ಬಿಜೆಪಿ- ಜಿಪಿಪಿ ನಡುವೆ ನೇರ ಮುಖಾಮುಖಿ ಏರ್ಪಟ್ಟಿದೆ. ನಿಗದಿತ ಸಮಯದಲ್ಲಿ ಪಕ್ಷದ `ಬಿ' ಫಾರಂ ಸಲ್ಲಿಸಲಾಗದೆ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆಯ ಅವಕಾಶ ಕಳೆದುಕೊಂಡಿದ್ದಾರೆ. ಬಿಜೆಪಿಯು ಕೃಷಿ ಸಚಿವ ಮತ್ತು ಲೇವಾ ಸಮಾಜದ ಮುಖಂಡ ಕನು ಭಲಾಲ ಅವರನ್ನು ಕಣಕ್ಕಿಳಿಸಿದೆ. ಲೇವಾ ಪಟೇಲರ ಮತಗಳನ್ನು ಒಡೆಯುವ ತಂತ್ರವನ್ನು ಮೋದಿ ಮಾಡಿದ್ದಾರೆ. ಆ ಮೂಲಕ ಕೇಶುಭಾಯ್ ರಾಜಕೀಯ ಜೀವನ ಮುಗಿಸುವ ಉದ್ದೇಶ ಮುಖ್ಯಮಂತ್ರಿ ಅವರಿಗಿದ್ದಂತಿದೆ.

ಭಲಾಲ, ಈ ಕ್ಷೇತ್ರದಿಂದ ಮೂರನೇ ಸಲ ಆಯ್ಕೆ ಬಯಸಿದ್ದಾರೆ. 2002, 2007ರ ಚುನಾವಣೆಯಲ್ಲೂ ಅವರು ಚುನಾಯಿತರಾಗಿದ್ದರು. ಹೋದ ಸಲ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ರಿಬಾಡಿಯಾ ಅವರನ್ನು 4,229 ಮತಗಳ ಅಂತರದಿಂದ ಸೋಲಿಸಿದ್ದರು. ಕೇಶುಭಾಯ್ ಕ್ಷೇತ್ರ ಬಿಟ್ಟ ಬಳಿಕ ಕೃಷಿ ಸಚಿವರು ವಶ ಮಾಡಿಕೊಂಡಿದ್ದಾರೆ.

ದೀನ ಸ್ಥಿತಿ: ಕಾಂಗ್ರೆಸ್ ವಿಶವದರ್ ಕ್ಷೇತ್ರದಲ್ಲಿ ಮತದಾನಕ್ಕೆ ಮೊದಲೇ `ಔಟ್' ಆದ ಕಥೆ ತಮಾಷೆಯಾಗಿದೆ. ರತಿಲಾಲ್ ಮಂಗ್ರೋಲಿಯಾ ಅವರನ್ನು ಪಕ್ಷ ಕಣಕ್ಕಿಳಿಸಿತ್ತು. ಚುನಾವಣಾ ಆಯೋಗ ಮಂಗ್ರೋಲಿಯಾ ನಾಮಪತ್ರ ಪರಿಶೀಲಿಸಿ ತಿರಸ್ಕರಿಸಿತು. `ಇವರೇ ಪಕ್ಷದ ಅಭ್ಯರ್ಥಿ' ಎಂದು ಖಾತರಿಪಡಿಸುವ ಅಧಿಕೃತ ಪತ್ರವನ್ನು ಸಲ್ಲಿಸದ್ದರಿಂದ ನಾಮಪತ್ರ ತಿರಸ್ಕೃತಗೊಂಡಿತು.

ಮಂಗ್ರೋಲಿಯಾ ಪರ ಅಧಿಕೃತ ಪತ್ರ ಕೊಡಲು ಜಿಲ್ಲಾ ಅಧ್ಯಕ್ಷರು ಚುನಾವಣಾ ಅಧಿಕಾರಿ ಕಚೇರಿಗೆ ಹೋದಾಗ ಅಪರಿಚಿತ ಯುವಕ ಅವರ ಕೈಯಿಂದ `ಬಿ' ಫಾರಂ ಪತ್ರ ಕಿತ್ತುಕೊಂಡು ಪರಾರಿಯಾದ. ಇದು ನಡೆದಿದ್ದು ನಾಮಪತ್ರ ಸಲ್ಲಿಸುವ ಕಡೇ ದಿನ. ಮೂರು ಗಂಟೆಯೊಳಗೆ ಪತ್ರ ಆಯೋಗದ ಕೈಸೇರಬೇಕಾಗಿತ್ತು. ಈ ಅನಿರೀಕ್ಷಿತ  ಘಟನೆಯಿಂದ ಐದು ನಿಮಿಷ ತಡವಾಯಿತು. ಇದರಿಂದ ಕೇಶುಭಾಯ್ ಅವರಿಗೆ ಅನುಕೂಲವೇ ಆಗಿದೆ ಎಂಬುದು ವಿಶವದರ್ ಮತದಾರರ ಅಭಿಪ್ರಾಯ.

ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸೋತ ಹರೀಶ್ ರಿಬಾಡಿಯಾ ಹೆಸರನ್ನು ಮೊದಲು ಪ್ರಕಟಿಸಿತ್ತು. ಕಡೇ ಗಳಿಗೆಯಲ್ಲಿ ಬದಲಾವಣೆ ಮಾಡಿ ಮಂಗ್ರೋಲಿಯಾ ಅವರಿಗೆ ಟಿಕೆಟ್ ನೀಡಿತು. ಇಬ್ಬರಿಗೂ ಚುನಾವಣೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ.

ಜುನಾಗಢ ಮತ್ತು ವಿಶವದರ್ ನಮ್ಮ ಉತ್ತರ ಕರ್ನಾಟಕದ ಭಾಗಗಳನ್ನು ಹೋಲುತ್ತವೆ. ಊರ ಹೊರಗಿನ ರಸ್ತೆಗಳು ವಿಶಾಲವಾಗಿದ್ದರೂ ಒಳಗಿನ ರಸ್ತೆಗಳು ಸುಧಾರಣೆ ಕಂಡಿಲ್ಲ. ಮೂಲಸೌಲಭ್ಯ ಅಭಿವೃದ್ಧಿ ಆಗಬೇಕು. ನೀರಿನ ಸಮಸ್ಯೆಯಿದ್ದರೂ ವಿದ್ಯುತ್‌ಗೆ ಕೊರತೆ ಇಲ್ಲ. `ಸಿಂಗಲ್ ಫೇಸ್' ವಿದ್ಯುತ್ 24 ಗಂಟೆ ಪೂರೈಕೆಯಾಗುತ್ತದೆ. ಆದರೆ, ದುಬಾರಿ. ಕೃಷಿ ಪಂಪ್‌ಸೆಟ್‌ಗಳಿಗೆ `ಥ್ರಿ ಫೇಸ್' ಕರೆಂಟ್ ಆರರಿಂದ ಎಂಟು ಗಂಟೆ ಪೂರೈಕೆಯಾಗುತ್ತಿದೆ.

ಮಳೆ ಕೈಕೊಟ್ಟಿದ್ದರಿಂದ ಶೇಂಗಾ ಹೋಯಿತು. ಹತ್ತಿಯೂ ಒಣಗಿದ್ದು, ಕೃಷಿಕರು ಕಂಗೆಟ್ಟಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಸಣ್ಣಪುಟ್ಟವರು ಕೂಲಿನಾಲಿ ಮಾಡುತ್ತಿದ್ದಾರೆ. ಸ್ವಲ್ಪ ಅನುಕೂಲವಾಗಿದ್ದವರು ಊರಿನ ಕಟ್ಟೆ ಮೇಲೆ ಗುಂಪು ಕಟ್ಟಿಕೊಂಡು ಚುನಾವಣೆ ಬಗ್ಗೆ ಹರಟುತ್ತಿದ್ದಾರೆ.

ಕೇಶುಭಾಯ್ ಬೇರೆ ಕ್ಷೇತ್ರಗಳಲ್ಲಿ ಸುತ್ತಾಡುತ್ತಿರುವುದರಿಂದ ಇನ್ನು ವಿಶವದರ್‌ಗೆ ತಲೆ ಹಾಕಿಲ್ಲ. ಆದರೆ, ಪಕ್ಷದ ಕಾರ್ಯಕರ್ತರು ಹಿರಿಯ ನಾಯಕನ ಪರ ಪ್ರಚಾರ ಮಾಡುತ್ತಿದ್ದಾರೆ. ಲೇವಾ ಸಮಾಜಕ್ಕೆ ಸೇರಿದ `ಕೂಡಲಧಾಮ' ಮಠ ಮಾಜಿ ಮುಖ್ಯಮಂತ್ರಿಗೆ ಬೆಂಬಲ ಕೊಡುವಂತೆ ಹುಕುಂ ಹೊರಡಿಸಿದೆ. ಈ ಸಮಾಜದ ಅತ್ಯಂತ ಪ್ರಭಾವಿ ನಾಯಕ ನರೇಶ್ ಪಟೇಲ್, `ಬಾಪ' ಬೆಂಬಲಕ್ಕೆ ಸಮಾಜ ಒಗ್ಗೂಡಬೇಕು ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಮತ್ತು ಜಿಪಿಪಿ ನಡುವೆ ವಿಶವದರ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಲೇವಾ ಪಟೇಲರು ಸಂಪೂರ್ಣವಾಗಿ ಕೇಶುಬಾಪಾ ಅವರನ್ನೇ ಬೆಂಬಲಿಸಲಿದ್ದಾರೆಂದು ಹೇಳುವುದು ಕಷ್ಟ. ಕನು ಭಲಾಲ ಲೇವಾ ಸಮಾಜಕ್ಕೆ ಸೇರಿದವರಾದ್ದರಿಂದ ಪೈಪೋಟಿ ನಡೆಯಬಹುದೆಂದು ಕ್ಷೇತ್ರದ ಭಾಗವಾಗಿರುವ ಭಿಲ್ಕಾದ ಕೃಷಿಕ ಜಯೇಶ್‌ಭಾಯ್ ಹಾಗೂ ನಿಖಿಲ್‌ಭಾಯ್ ಅಭಿಪ್ರಾಯ.

`ಕೇಶುಭಾಯ್ ಒಳ್ಳೆಯ ಕೆಲಸ ಮಾಡಿದ್ದಾರೆ. ಉತ್ತಮ ಆಡಳಿತ ನೀಡಿದ್ದಾರೆ. ಮೋದಿ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಜಾತಿಯೊಂದೇ ಚುನಾವಣೆಗೆ ಮಾನದಂಡ ಆಗಲಾರದು. ಯಾರು ಏನು ಕೆಲಸ ಮಾಡಿದ್ದಾರೆಂದು ನೋಡಬೇಕಾಗುತ್ತದೆ. ಎಲ್ಲವನ್ನು ತುಲನೆ ಮಾಡಿ ಮತ ಹಾಕುತ್ತೇವೆ' ಎನ್ನುವುದು ವಿಶವದರ್ ಮತದಾರರ ನಿಲುವು.

(ನಾಳಿನ ಸಂಚಿಕೆಯಲ್ಲಿ ಭಾಗ 7)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.