ADVERTISEMENT

ರಾಜಧಾನಿಯಲ್ಲಿ ಆಂಧ್ರ ಮುಖ್ಯಮಂತ್ರಿಯ 'ಮೌನ ಧರಣಿ'

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2014, 12:56 IST
Last Updated 5 ಫೆಬ್ರುವರಿ 2014, 12:56 IST

ನವದೆಹಲಿ / ಹೈದರಾಬಾದ್ (ಐಎಎನ್ಎಸ್): ಆಂಧ್ರಪ್ರದೇಶ ವಿಭಜನೆಯನ್ನು ವಿರೋಧಿಸಿ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಅವರು ತಮ್ಮ ಸಂಪುಟದ ಕೆಲವು ಸಹೋದ್ಯೋಗಿಗಳ ಜೊತೆಗೆ ರಾಷ್ಟ್ರದ ರಾಜಧಾನಿಯಲ್ಲಿ ಬುಧವಾರ 'ಮೌನ ಪ್ರತಿಭಟನೆ' ನಡೆಸಿದರು.

ಸೀಮಾಂಧ್ರ ಪ್ರದೇಶದ (ರಾಯಲಸೀಮಾ ಮತ್ತು ಕರಾವಳಿ ಆಂಧ್ರ ಪ್ರದೇಶ) ಕೇಂದ್ರ ಸಚಿವರು, ಕಾಂಗ್ರೆಸ್ ಸಂಸದರು ಮತ್ತು ರಾಜ್ಯ ಸಚಿವರು ಹಾಗೂ ಶಾಸಕರು ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಯ ಜೊತೆಗೂಡಿ ತೆಲಂಗಾಣ ರಾಜ್ಯ ರಚನೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬಾರದು ಎಂದು ಆಗ್ರಹಿಸಿದರು.

ಕಾಂಗ್ರೆಸ್ ವರಿಷ್ಠ ಮಂಡಳಿಯನ್ನು ಧಿಕ್ಕರಿಸಿದ ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗರು ರಾಜ್ಯ ವಿಧಾನಸಭೆಯ ಉಭಯ ಸದನಗಳು ತಿರಸ್ಕರಿಸಿದ ಆಂಧ್ರ ಪ್ರದೇಶ ಪುನರ್ ವಿಂಗಡಣಾ ಮಸೂದೆ -2013 ನ್ನು ಸಂಸತ್ತಿನಲ್ಲಿ ಮಂಡಿಸಬಾರದು ಎಂದು ಆಗ್ರಹಿಸಿ  ಜಂತರ ಮಂತರ್ ನಲ್ಲಿ ಇಡೀ ದಿನ ಧರಣಿ ಕುಳಿತರು.

ಕೇಂದ್ರ ಸಚಿವರಾದ ಕೆ.ಎಸ್. ರಾವ್, ಪಲ್ಲಂ ರಾಜು, ಕೆ. ಚಿರಂಜೀವಿ ಮತ್ತು ಡಿ. ಪುರಂದೇಶ್ವರಿ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಬೋತ್ಸಾ ಸತ್ಯನಾರಾಯಣ ಹಾಗೂ ಭಾರಿ ಸಂಖ್ಯೆಯಲ್ಲಿ ಸೀಮಾಂಧ್ರದ ಪಕ್ಷ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರತಿಭಟನಕಾರರು ಸಂಯುಕ್ತ ಆಂಧ್ರ ಪರ ಘೋಷಣೆಗಳನ್ನು ಕೂಗಿದರು. ಯಮುನಾ ನದಿ ದಂಡೆಯಲ್ಲಿರು ಮಹಾತ್ಮ ಗಾಂಧಿಯವರ ಸಮಾಧಿ ಸ್ಥಳ ರಾಜಘಾಟ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಜಂತರ್ ಮಂತರ್ ಪ್ರದೇಶಕ್ಕೆ ಬಂದರು.

ಮುಖ್ಯಮಂತ್ರಿ ಮತ್ತು ಬೆಂಬಲಿಗರು ಆಂಧ್ರ ಪ್ರದೇಶ ಭವನದಿಂದ ಜಂತರ್ ಮಂತರ್ ಗೆ ಹೊರಟಾಗ ಭವನದಲ್ಲಿ ತೆಲಂಗಾಣ ಪ್ರದೇಶದ ಮಂತ್ರಿಗಳು ಸೇರಿದಂತೆ ತೆಲಂಗಾಣ ಬೆಂಬಲಿಗರು ತಡೆಯಲು ಯತ್ನಿಸಿದ್ದರಿಂದ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣಗೊಂಡಿತು.

ಮುಷ್ಠಿ ಬಿಗಿ ಹಿಡಿದು ಜೋರಾಗಿ ಘೋಷಣೆ ಕೂಗುತ್ತಾ ಮುಖ್ಯಮಂತ್ರಿ ಗದ್ದಲದ ಮಧ್ಯೆಯೇ ಬಸ್ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.