ADVERTISEMENT

ರಾಜಭವನವೂ ಆರ್ ಟಿ ಐ ವ್ಯಾಪ್ತಿಗೆ: ಗೋವಾ ಸಿಐಸಿ ತೀರ್ಪು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 8:50 IST
Last Updated 1 ಏಪ್ರಿಲ್ 2011, 8:50 IST

ಪಣಜಿ (ಪಿಟಿಐ): ರಾಜ್ಯಪಾಲರ ಕಚೇರಿ (ರಾಜಭವನ) ಕೂಡಾ ಮಾಹಿತಿ ಹಕ್ಕು ಕಾಯ್ದೆಯ (ಆರ್ ಟಿ ಐ) ವ್ಯಾಪ್ತಿಗೆ ಒಳಪಡುತ್ತದೆ ಎಂದು ಗೋವಾ ರಾಜ್ಯ ಮಾಹಿತಿ ಆಯೋಗ ತೀರ್ಪು ನೀಡಿದೆ.

 ರಾಜ್ಯಪಾಲರು ಸರ್ಕಾರಿ ಅಧಿಕಾರಿ ಅಲ್ಲ ಎಂಬ ರಾಜಭವನದ ಪ್ರತಿಪಾದನೆಯನ್ನು ಪ್ರಶ್ನಿಸಿ ಗೋವಾ ಮೂಲದ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಏರಿಸ್ ರೋಡ್ರಿಗಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ಮಾಹಿತಿ ಕಮೀಷನರ್ (ಸಿಐಸಿ) ಮೋತಿಲಾಲ್ ಕೆನ್ನಿ ಅವರು ಈ ಐತಿಹಾಸಿಕ ತೀರ್ಪು ನೀಡಿದರು.

ರಾಜ್ಯಪಾಲ ಡಾ. ಎಸ್.ಎಸ್. ಸಿಂಧು ಅವರು ಕೂಡಾ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಾರ್ವಜನಿಕ ಅಧಿಕಾರಿಯೇ ಎಂದು ಅವರು ಹೇಳಿದರು.

ರಾಜ್ಯಪಾಲರ ಕಚೇರಿಯು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬುದಾಗಿ ಪ್ರತಿಪಾದಿಸಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಎನ್. ರಾಧಾಕೃಷ್ಣನ್ ಅವರು ರೋಡ್ರಿಗಸ್ ಅವರು ಕೇಳಿದ್ದ ಮಾಹಿತಿ ನೀಡಲು ನಿರಾಕರಿಸಿದ್ದರು.

ರೋಡ್ರಿಗಸ್ ಅವರು ಮಾಹಿತಿ ಹಕ್ಕು ಕಾಯ್ದೆಯ ಅಡಿ ಕೇಳಿದ ಮಾಹಿತಿಯನ್ನು ಒದಗಿಸುವಂತೆಯೂ ಮುಖ್ಯ ಮಾಹಿತಿ ಕಮೀಷನರ್ ಅವರು ರಾಜಭವನಕ್ಕೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.