ADVERTISEMENT

ರಾಜೀವ್ ಹಂತಕರಿಗೆ ಕ್ಷಮಾದಾನ: ಒಲವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ಕ್ಷಮಾದಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿರುವುದರ ಮಧ್ಯೆ, 20 ವರ್ಷಗಳ ಹಿಂದೆ ನಡೆದ ಈ ಹತ್ಯೆ ಪ್ರಕರಣದ ಪ್ರಮುಖ ತನಿಖಾಧಿಕಾರಿ ಡಿ.ಆರ್. ಕಾರ್ತಿಕೇಯನ್ ಅವರು ಮೂವರು ತಪ್ಪಿತಸ್ಥರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಂತಕರಿಗೆ ಕ್ಷಮಾದಾನ ನೀಡಬೇಕು ಎಂಬ ಬೇಡಿಕೆಗೆ ತಮಿಳುನಾಡಿನಲ್ಲಿ ಈಗ ಭಾವನಾತ್ಮಕ ಸ್ಪರ್ಶ ದೊರೆತಿರುವ ಹಿನ್ನೆಲೆಯಲ್ಲಿ, ಪ್ರಾದೇಶಿಕತೆಯ ಆಧಾರದಲ್ಲಿ ತೆಗೆದುಕೊಳ್ಳುವ ತಿರ್ಮಾನ ಭವಿಷ್ಯದಲ್ಲಿ ಅಪಾಯಕಾರಿಯಾಗುವ ಸಂಭವವಿರುವುದರಿಂದ ಮರಣದಂಡನೆ ಬಗೆಗಿನ ನೀತಿಯನ್ನು ಚರ್ಚಿಸಲು ಲೋಕಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.

`ನನಗೆ ವೈಯಕ್ತಿವಾಗಿ ಅವರ ವಿರುದ್ಧ ಯಾವುದೇ ವಿರೋಧವಿಲ್ಲ. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಈಗ ಸರ್ಕಾರ ತನ್ನ ಕೆಲಸ ಮಾಡಲಿ. ಒಂದು ವೇಳೆ ಅವರಿಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ ಮಾಡಿದರೆ ನನಗೆ ಸಂತೋಷವಾಗುತ್ತದೆ~ ಎಂದು ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಕಾರ್ತಿಕೇಯನ್ ಹೇಳಿದ್ದಾರೆ.

1991ರ ಮೇ 21ರಂದು ರಾಜೀವ್ ಗಾಂಧಿ ಹತ್ಯೆಯಾದ ಒಂದು ದಿನದ ಬಳಿಕ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಲು  ಕಾರ್ತಿಕೇಯನ್ ಅವರಿಗೆ ಸೂಚಿಸಲಾಗಿತ್ತು.ಹತ್ಯೆ ಪ್ರಕರಣಕ್ಕೆ ಒಂದು ವರ್ಷವಾಗುವ ದಿನದ ಹಿಂದಿನ ದಿನವಾದ 1992ರ ಮೇ 20ರಂದು ಕಾರ್ತಿಕೇಯನ್ ನೇತೃತ್ವದ ತನಿಖಾ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ 41 ಜನರ ವಿರುದ್ಧ ಆರೋಪಪಟ್ಟಿ ದಾಖಲಿಸಿತ್ತು.

ಇದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಳಿನಿಗೆ ಕ್ಷಮಾದಾನ ದೊರೆತಿರುವುದು ಇತರ ಮೂವರಿಗೆ ನೆರವಾಗಬಹುದು ಎಂದು ಅವರು ಹೇಳಿದ್ದಾರೆ.ರಾಜೀವ್ ಹಂತಕರಾದ ಮುರುಗನ್, ಶಾಂತನ್, ಪೇರ್‌ಅರಿವಳನ್ ಮತ್ತು ನಳಿನಿಗೆ ಸುಪ್ರೀಂಕೋರ್ಟ್ 1999ರಲ್ಲಿ ಮರಣದಂಡನೆ ವಿಧಿಸಿತ್ತು.

ಮುರುಗನ್, ಶಾಂತನ್, ಪೇರ್‌ಅರಿವಳನ್ ಅವರು ಕ್ಷಮಾದಾನಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಿರಸ್ಕರಿಸಿದ್ದರು.ಸೆಪ್ಟೆಂಬರ್ 8ರಂದು ನಡೆಯಬೇಕಾಗಿದ್ದ ಗಲ್ಲು ಶಿಕ್ಷೆ ಜಾರಿಗೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ  ಎಂಟು ವಾರಗಳ ಮಧ್ಯಂತರ ತಡೆಯಾಜ್ಞೆ ನೀಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.